ADVERTISEMENT

ಹಿನ್ನೋಟ 2018: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪುಗಳು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 19:45 IST
Last Updated 29 ಡಿಸೆಂಬರ್ 2018, 19:45 IST
.
.   

ಅಬ್ಬಾ... ನೋಡ, ನೋಡುತ್ತಲೇ 2018 ಕಳೆದು ಹೋಯಿತಲ್ಲ. ಸಿಹಿ-ಕಹಿ ನೆನಪುಗಳ ಜತೆಗೆ ಮತ್ತೊಂದು ಹೊಸ ವರ್ಷಕ್ಕೆ ಕಾಲಿಸಿರಿಸುತ್ತಿದ್ದೇವೆ. ಕಳೆದು ಹೋದ ವರ್ಷದತ್ತ ಹಿನ್ನೋಟ ಹರಿಸಿದಾಗ ಹಲವು ಘಟನೆಗಳು ಕಣ್ಮುಂದೆ ಸುಳಿಯುತ್ತವೆ.

ಸುಪ್ರೀಂ ಕೋರ್ಟ್‌ ಪಾಲಿಗೆ 2018ನೆಯ ಇಸವಿ ಆರಂಭವಾಗಿದ್ದು ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಭೂತಪೂರ್ವ ಎನ್ನುವಂತಹ ಪತ್ರಿಕಾಗೋಷ್ಠಿಯನ್ನು ಕರೆಯುವುದರ ಮೂಲಕ. ಪತ್ರಿಕಾಗೋಷ್ಠಿ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯಿ, ಕುರಿಯನ್ ಜೋಸೆಫ್, ಜೆ. ಚೆಲಮೇಶ್ವರ್ ಮತ್ತು ಎಂ.ಬಿ. ಲೋಕೂರ್ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಂಡಾಯ ಸಾರಿದರು. ನಂತರ ಅನೇಕ ಐತಿಹಾಸಿಕ ತೀರ್ಪು ನೀಡಿತು.

ಶಬರಿಮಲೆ: ಋತುಸ್ರಾವ ವಯಸ್ಸಿನ ಮಹಿಳೆಯರಿಗೆ ಕೂಡ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ಏರಿ, ದೇವಸ್ಥಾನ ಪ್ರವೇಶಿಸಲು ಹಕ್ಕಿದೆ ಎಂದು ಸಂವಿಧಾನ ಪೀಠ ಬಹುಮತದ ತೀರ್ಪು ನೀಡಿತು. ಪೂಜಿಸುವ ಹಕ್ಕು ಮತ್ತು ಮಹಿಳಾ ಸಮಾನತೆಯ ದೃಷ್ಟಿಯಿಂದ ಮಹತ್ವದ ತೀರ್ಪು ಇದು.

ADVERTISEMENT

ಆಧಾರ್‌: ಇದು 2017ರಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಖಾಸಗಿತನದ ವಿಚಾರದಲ್ಲಿ ನೀಡಿದ್ದ ಚಾರಿತ್ರಿಕ ತೀರ್ಪಿನ ಕಾರಣದಿಂದಾಗಿ ಬಹಳ ಮಹತ್ವ ಪಡೆದಿತ್ತು. ‘ಖಾಸಗಿತನ ಮೂಲಭೂತ ಹಕ್ಕು’ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌, ‘ಆಧಾರ್‌ನಿಂದ ಖಾಸಗಿತನಕ್ಕೆ ಧಕ್ಕೆ ಆಗುತ್ತದೆಯೇ’ ಎಂಬುದನ್ನು ಪರಿಶೀಲಿಸಿತ್ತು. ಬಹುಮತದ ತೀರ್ಪು ನೀಡಿದ ಕೋರ್ಟ್‌, ಆಧಾರ್‌ ಸಂಖ್ಯೆಯ ಬಳಕೆಯ ಮೇಲೆ ಮಿತಿ ಹೇರಿತು. ಬ್ಯಾಂಕ್‌ ಖಾತೆ ತೆರೆಯಲು, ಮೊಬೈಲ್‌ ಸಂಖ್ಯೆಗಳಿಗೆ ಆಧಾರ್‌ ಕಡ್ಡಾಯವಲ್ಲ ಎಂದು ಹೇಳಿ, ಆಧಾರ್‌ ಕಾಯ್ದೆಯು ಖಾಸಗಿತನವನ್ನು ಉಲ್ಲಂಘಿಸುವುದಿಲ್ಲ ಎಂದು ಸಾರಿತು.

ವ್ಯಭಿಚಾರ ಅಪರಾಧವಲ್ಲ: ವ್ಯಭಿಚಾರ ಅಪರಾಧವಲ್ಲ ಎಂದು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ನೀಡಿತು. ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್‌ ರದ್ದು ಮಾಡಿತು.

ಸಲಿಂಗಕಾಮಕ್ಕೆ ಸಮ್ಮತಿ: ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ ಎನ್ನುವ ಮೂಲಕ ಲೈಂಗಿಕ ಅಲ್ಪಸಂಖ್ಯಾತರ ಪಾಲಿಗೆ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿತು. ಸಮ್ಮತಿಯ ಸಲಿಂಗಕಾಮ ಎಂಬುದು ಮಾನಸಿಕ ಸಮಸ್ಯೆ ಅಲ್ಲ ಎಂದು ಸಂವಿಧಾನ ಪೀಠ ಹೇಳಿತು. ಬ್ರಿಟಿಷ್ ಕಾಲದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ನ್ನು ಭಾಗಶಃ ರದ್ದು ಮಾಡಿತು.

ಘನತೆಯಿಂದ ಸಾಯುವ ಹಕ್ಕು: ವಾಸಿಯಾಗದಂಥ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ದಯಾ ಮರಣಕ್ಕೆ ಅವಕಾಶ ನೀಡುವ ತೀರ್ಪು ಕೋರ್ಟ್‌ನಿಂದ ಬಂತು. ಇಂಥದ್ದೊಂದು ತೀರ್ಪು ನೀಡುವ ಮೂಲಕ ಸುಪ್ರೀಂ ಕೋರ್ಟ್‌, ಘನತೆಯಿಂದ ಸಾಯುವ ಹಕ್ಕು ಕೂಡ ವ್ಯಕ್ತಿಗೆ ಇದೆ ಎಂಬುದನ್ನು ಸ್ಪಷ್ಟಪಡಿಸಿತು. ಮಾರ ಣಾಂತಿಕ ರೋಗಗಳಿಂದ ಬಳಲುವ ವ್ಯಕ್ತಿಯು ‘ಮರಣ ಇಚ್ಛೆಯ ಉಯಿಲು’ ಬರೆಯಲು ಅವಕಾಶ ಕಲ್ಪಿಸಿತು.

ಕಲಾಪಗಳ ನೇರ ಪ್ರಸಾರ: ಸಾಂವಿಧಾನಿಕ ಮಹತ್ವದ ಕೋರ್ಟ್‌ ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್‌ ಸಮ್ಮತಿ ಸೂಚಿಸಿತು. ಇದು ಕೋರ್ಟ್‌ ಕಲಾಪ ಗಳಲ್ಲಿ ಏನು ನಡೆಯುತ್ತದೆ ಎಂಬುದನ್ನು ಇನ್ನಷ್ಟು ವಿವರವಾಗಿ ತಿಳಿಸಲು ಸಾರ್ವಜನಿಕರಿಗೆ ಸಹಕಾರಿ ಆಗುತ್ತದೆ ಎಂದು ಕಲಾಪಗಳ ನೇರ ಪ್ರಸಾರದ ಪರ ಇರುವವರು ವ್ಯಾಖ್ಯಾನಿಸಿದರು.

ತೀರ್ಪಿಗೆ ಪ್ರತಿಭಟನೆ: ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಅಡಿ ದೂರು ದಾಖಲಾದಾಗ ಏಕಾಏಕಿ ನಿರಪರಾಧಿಗಳನ್ನು ಬಂಧಿಸಬಾರದು ಎಂಬ ಕಾರಣಕ್ಕೆ ದೂರಿನ ಬಗ್ಗೆ ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿ ಪ್ರಾಥಮಿಕ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಈ ತೀರ್ಪು ಎಸ್‌ಸಿ, ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿ ದೇಶದ ಹಲವೆಡೆ ಪ್ರತಿಭಟನೆ ನಡೆದವು.

ಸಜ್ಜನ್‌ಗೆ ಶಿಕ್ಷೆ:

1984ರಲ್ಲಿ ನಡೆದ ಸಿಖ್ ವಿರೋಧಿ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಕ್ಕೆ ಮಾಜಿ ಕಾಂಗ್ರೆಸ್ಸಿಗ ಸಜ್ಜನ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿತು. ಇದನ್ನು ಪ್ರಶ್ನಿಸಿ ಸಜ್ಜನ್ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.