ADVERTISEMENT

ಕುಂಭ ಮೇಳದಲ್ಲಿ ’ಯೋಗಿ’ ಪವಿತ್ರ ಸ್ನಾನ; ಪಾಪ ತೊಳೆಯುವ ಮಾತನಾಡಿದ ಶಶಿ ತರೂರ್‌

₹36,000 ಕೋಟಿ ವೆಚ್ಚದ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆ ಘೋಷಿಸಿದ ಸಿಎಂ

ಏಜೆನ್ಸೀಸ್
Published 30 ಜನವರಿ 2019, 8:41 IST
Last Updated 30 ಜನವರಿ 2019, 8:41 IST
   

ಪ್ರಯಾಗ್‌ರಾಜ್‌: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಅವರ ಸಂಪುಟ ಸಚಿವರು ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅದರ ಚಿತ್ರಗಳಿಂದ ಪ್ರೇರಣೆ ಪಡೆದು ಕಾಂಗ್ರೆಸ್‌ ಮುಖಂಡ ಶಶಿ ತರೂರ್ ಹಿಂದಿಯಲ್ಲಿ ಮಾಡಿರುವ ಟ್ವೀಟ್‌ ಚರ್ಚೆಗೆ ಗ್ರಾಸವಾಗಿದೆ.

ಕೇಸರಿ ಪಂಚೆ ಉಟ್ಟಿದ್ದ ಉತ್ತರ ಪ್ರದೇಶ ಸಿಎಂ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಮಂಗಳವಾರ ಸಂಪುಟ ಸಚಿವರ ಸಭೆ ನಡೆಸಿದ ಬಳಿಕ ಇಲ್ಲಿನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮದಲ್ಲಿ ಸ್ನಾನ ಮಾಡುವುದು ಪವಿತ್ರವೆಂದು ಭಾವಿಸಲಾಗಿದೆ.

’ಗಂಗೆಯನ್ನು ಶುಚಿಯಾಗಿಡಲು ಬಯಸುವಿರಿ, ಅಲ್ಲಿಯೇ ಪಾಪಗಳನ್ನು ತೊಳೆಯುವಿರಿ. ಈ ಸಂಗಮದಲ್ಲಿ ಎಲ್ಲರೂ ಬೆತ್ತಲು. ಜೈ ಗಂಗಾ ಮೈಯಾ ಕೀ’ ಎಂದು ಶಶಿ ತರೂರ್‌ ಟ್ವೀಟಿಸಿದ್ದಾರೆ.

ADVERTISEMENT

ಕೆಲವು ಸಾಧುಗಳು ಹಾಗೂ ಸಚಿವರ ಜತೆಗೆ ಯೋಗಿ ಆದಿತ್ಯನಾಥ ನದಿಯಲ್ಲಿ ಇಳಿದು ಪವಿತ್ರ ಸ್ನಾನ ಮಾಡಿದ್ದಾರೆ. ಶಶಿ ತರೂರ್‌ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಚಿವ ಸಿದ್ಧಾರ್ಥ್‌ ನಾಥ್‌ ಸಿಂಗ್‌, ’ಕುಂಭ ಮೇಳದ ಮಹತ್ವವನ್ನು ಅವರು ಹೇಗೆ ತಾನೆ ತಿಳಿಯಲು ಸಾಧ್ಯ? ಆತ ಪಡೆದುಬಂದಿರುವ ಸಂಸ್ಕಾರ, ಬೆಳೆದ ವಾತಾವರಣ, ಇದು ಅವರಿಗೆ ಅರ್ಥವಾಗುವುದಿಲ್ಲ. ನೀವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೀರಿ, ಕುಂಭದಲ್ಲಿ ಪವಿತ್ರ ಸ್ನಾನ ಮಾಡಿ ಹಾಗೂ ನಿಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಅನುಭವಿಸಬಹುದು’ ಎಂದಿದ್ದಾರೆ.

ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿ ಪರಿಗಣಿಸಲಾಗಿರುವ ಕುಂಭ ಮೇಳದಿಂದ ರಾಜಕೀಯ ಲಾಭ ಪಡೆಯಲು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ’ರಾಜಕೀಯ ಮತ್ತು ಧರ್ಮದ ನಡುವೆ ಹೆಚ್ಚಿನ ಅಂತರವಿಲ್ಲ’ ಎಂದು ಟೀಕೆಗಳಿಗೆ ಸಿಎಂ ಯೋಗಿ ಆದಿತ್ಯನಾಥ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಪ್ರದೇಶದ ಪಶ್ಚಿಮದಲ್ಲಿರುವ ಮೀರತ್‌ನಿಂದ ಪ್ರಯಾಗ್‌ರಾಜ್‌ಗೆ ಸಂಪರ್ಕ ಕಲ್ಪಿಸುವ ₹36,000 ಕೋಟಿ ವೆಚ್ಚದ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು ಯೋಗಿ ಆದಿತ್ಯನಾಥ ಘೋಷಿಸಿದ್ದಾರೆ. ಸುಮಾರು 600 ಕಿ.ಮೀ. ಉದ್ದದ ಈ ಯೋಜನೆ ಜಗತ್ತಿನಲ್ಲಿಯೇ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.