ADVERTISEMENT

ಬಿಜೆಪಿ ದುರಾಡಳಿತದಿಂದ ತೀವ್ರ ಬಡತನಕ್ಕೆ ಒಳಗಾದ ಉತ್ತರ ಪ್ರದೇಶ: ಚಿದಂಬರಂ

‘ಯೋಗಿ ಅವಧಿಯಲ್ಲಿ ಸಾಲ ಶೇ 40ರಷ್ಟು ಏರಿಕೆ’

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 20:45 IST
Last Updated 27 ಫೆಬ್ರುವರಿ 2022, 20:45 IST
   

ಲಖನೌ (ಪಿಟಿಐ): ‘ಯೋಗಿ ಆದಿತ್ಯನಾಥ ಅವರ ಆಳ್ವಿಕೆಯಲ್ಲಿ ಉತ್ತರ ಪ್ರದೇಶದ ಸಾಲದ ಪ್ರಮಾಣ ಶೇ 40ರಷ್ಟು ಏರಿಕೆಯಾಗಿದೆ. ಬಡತನದ ವಿವಿಧ ಸೂಚ್ಯಂಕಗಳಲ್ಲಿ ಉತ್ತರ ಪ್ರದೇಶವು ಬಹಳ ಹಿಂದೆ ಉಳಿದಿದೆ. ಇದಕ್ಕೆಲ್ಲಾ ಯೋಗಿ ಅವರ ನೀತಿಗಳೇ ಕಾರಣ’ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಆರೋಪಿಸಿದ್ದಾರೆ.

ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಇಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಅವರು ಈ ಆರೋಪ ಮಾಡಿದ್ದಾರೆ. ರಾಜ್ಯದ ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಅವರು ಕೋರಿದ್ದಾರೆ.

‘ಆದಿತ್ಯನಾಥ ಅವರ ಆಳ್ವಿಕೆಯು ಸರ್ವಾಧಿಕಾರ, ಧಾರ್ಮಿಕ ದ್ವೇಷ, ಜಾತಿಜಗಳ, ಪೊಲೀಸ್‌ ದಬ್ಬಾಳಿಕೆ ಮತ್ತು ಲಿಂಗ ತಾರತಮ್ಯದ ಮಿಶ್ರಣವಾಗಿತ್ತು. ಈ ಸ್ವರೂಪದ ಆಡಳಿತದ ಕಾರಣಕ್ಕೇರಾಜ್ಯದ ಬಡತನವು ಹೆಚ್ಚಾಗಿದೆ. ಬಡವರು ಮತ್ತಷ್ಟು ಬಡವರಾಗಿದ್ದಾರೆ. ಯೋಗಿ ಅವರ ಅವಧಿಯಲ್ಲಿ ರಾಜ್ಯದ ಸಾಲದ ಮೊತ್ತ ₹6.62 ಲಕ್ಷ ಕೋಟಿಗೆ ಏರಿಕೆಯಾಗಿದೆ’ ಎಂದಿದ್ದಾರೆ.

ADVERTISEMENT

‘ಈ ಸರ್ಕಾರವು ಯಾವುದೇ ನೇಮಕಾತಿಯನ್ನು ನಡೆಸುತ್ತಲೇ ಇಲ್ಲ. ಏಕೆಂದರೆ ನೇಮಕ ಮಾಡಿಕೊಂಡರೆ ಸಂಬಳ ನೀಡಲು ಸರ್ಕಾರವ ಬಳಿ ಹಣವಿಲ್ಲ. ಹೀಗಾಗಿಯೇ ನೇಮಕಾತಿ ನಡೆಸುತ್ತಿಲ್ಲ. ಉದ್ಯೋಗಗಳೇ ಇಲ್ಲದ ಕಾರಣ ರಾಷ್ಟ್ರೀಯ ಸರಾಸರಿ ತಲಾ ಆದಾಯಕ್ಕಿಂತ, ಉತ್ತರ ಪ್ರದೇಶದ ತಲಾ ಆದಾಯ ಕಡಿಮೆ ಇದೆ. ಯೋಗಿ ಆಡಳಿತದ ಅವಧಿಯಲ್ಲಿ ರಾಜ್ಯದ ಜನರ ತಲಾ ಆದಾಯವು ಶೇ 1.9ರಷ್ಟು ಇಳಿಕೆಯಾಗಿದೆ. ರಾಜ್ಯದ ಸಾಲವು, ರಾಜ್ಯದ ಜಿಡಿಪಿಯ ಶೇ34.2ರಷ್ಟಾಗಿದೆ. ಇವೆಲ್ಲವನ್ನೂ ನೀತಿ ಆಯೋಗದ ವರದಿಯಲ್ಲೇ ಹೇಳಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಉದ್ಯೋಗ ಇಲ್ಲದೇ ಇರುವ ಕಾರಣಕ್ಕೆ, ಉತ್ತರ ಪ್ರದೇಶದ ಬಡವರ ಪ್ರಮಾಣವು ಶೇ 37.9ಕ್ಕೆ ಏರಿಕೆಯಾಗಿದೆ. ದೇಶದ ಎಲ್ಲಾ ರಾಜ್ಯ
ಗಳಿಗಿಂತ ಇಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚು. ಸರ್ಕಾರದ ನೀತಿಗಳಿಂದ ಉದ್ಯೋಗ ಕಳೆದುಕೊಂಡವರಲ್ಲಿ ಯುವಜನರೇ ಹೆಚ್ಚು2018ರಿಂದ 15–29 ವರ್ಷದ ನಿರುದ್ಯೋಗಿಗಳ ಪ್ರಮಾಣ ಎರಡಂಕಿಗಿಂತ ಹೆಚ್ಚೇ ಇದೆ. ರಾಜ್ಯದ ಪ್ರತಿ ನಾಲ್ವರಲ್ಲಿ ಒಬ್ಬ ಯುವಕ ಅಥವಾ ಯುವತಿಗೆ ಕೆಲಸವಿಲ್ಲ’ ಎಂದು ಅವರು ನೀತಿ ಆಯೋಗದ ವರದಿಯನ್ನು ಉಲ್ಲೇಖಿಸಿದ್ದಾರೆ.‘ಸರ್ಕಾರ ಯಾವುದೇ ನೇಮಕಾತಿ ಮಾಡದೇ ಇರುವ ಕಾರಣ ಶಾಲೆಗಳಲ್ಲಿ 2.77 ಲಕ್ಷ ಶಿಕ್ಷಕರ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಇಲ್ಲಿ ಉದ್ಯೋಗ ದೊರೆಯದೇ ಇರುವ ಕಾರಣ ರಾಜ್ಯದ ಪ್ರತಿ 16 ಜನರಲ್ಲಿ ಒಬ್ಬರು ಉದ್ಯೋಗ ಅರಸಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಕೆಟ್ಟ ಆಡಳಿತ ನೀಡಿರುವ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೀರಾ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಚತುಷ್ಕೋನ ಸ್ಪರ್ಧೆ’

‘ಉತ್ತರ ಪ್ರದೇಶದಲ್ಲಿ ಈ ಬಾರಿ ನಾಲ್ಕು ಕೋನದ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ, ಎಸ್‌ಪಿ, ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಕಣದಲ್ಲಿ ಪೈಪೋಟಿ ನಡೆಸುತ್ತಿವೆ. ನಾಲ್ಕೂ ಪಕ್ಷಗಳಿಗೆ ಅವುಗಳದ್ದೇ ಆದ ಸಾಮರ್ಥ್ಯವಿದೆ. ಹಾಗೆಯೇ ದೌರ್ಬಲ್ಯವೂ ಇದೆ. ಇವು ಮತದಾನದಲ್ಲಿ ಪ್ರಭಾವ ಬೀರಲಿದೆ’ ಎಂದು ಚಿದಂಬರಂ ಹೇಳಿದ್ದಾರೆ. ‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೋರಾಟ ಈಗ ಬದಲಾಗಿದೆ. ಹಲವು ದಶಕಗಳ ನಂತರ ಕಾಂಗ್ರೆಸ್‌ ಇದೇ ಮೊದಲ ಬಾರಿ ಎಲ್ಲಾ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆರಂಭಿಸಿದ, ‘ನಾನು ಹುಡುಗಿ, ಹೋರಾಡಬಲ್ಲೆ’ ಅಭಿಯಾನವು ಚುನಾವಣೆಗೆ ಹೊಸ ಆಯಾಮ ನೀಡಿದೆ. ಲಿಂಗ ತಾರತಮ್ಯ ಮತ್ತು ಲಿಂಗ ಸಮಾನತೆಯನ್ನು ಈ ಅಭಿಯಾನವು ಚುನಾವಣೆಯ ವಿಷಯವಾಗಿಸಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.