ADVERTISEMENT

ಪಂಜಾಬ್‌ ಕಾಂಗ್ರೆಸ್‌: ಸಿಧು ಬೆಂಬಲಕ್ಕೆ ನಿಂತ ಮುಖಂಡರು, ರಾಜೀನಾಮೆ ಪರ್ವ ಶುರು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2021, 15:47 IST
Last Updated 28 ಸೆಪ್ಟೆಂಬರ್ 2021, 15:47 IST
   

ಚಂಡೀಗಡ: ಪಂಜಾಬ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಯೋಗಿಂದರ್‌ ಢಿಂಗ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಬೆನ್ನಲ್ಲೇ, ಅವರಿಗೆ ಬೆಂಬಲವಾಗಿ ಈವರೆಗೂ ಐದು ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರಜಿಯಾ ಸುಲ್ತಾನಾ, ಶಾಸಕ ಪರಗಟ ಸಿಂಗ್‌, ಪಂಜಾಬ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಗೌತಮ್‌ ಸೇಠ್ (ತರಬೇತಿ ಮೇಲ್ವಿಚಾರಣೆ), ಕಜಾಂಚಿ ಗುಲ್ಜರ್‌ ಇಂದರ್‌ ಚಾಹಲ್‌ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿಧು ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಸಿಧು ಅವರ ರಾಜೀನಾಮೆಯನ್ನು ಕಾಂಗ್ರೆಸ್‌ ವರಿಷ್ಠರು ಸ್ವೀಕರಿಸಿಲ್ಲ. ರಾಜ್ಯದ ಮಟ್ಟದಲ್ಲಿಯೇ ವಿಚಾರ ಬಗೆಹರಿಸಿಕೊಳ್ಳುವಂತೆ ವರಿಷ್ಠರು ಪಕ್ಷದ ಮುಖಂಡರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.

'ಅವರು (ನವಜೋತ್‌ ಸಿಂಗ್‌ ಸಿಧು) ಪಂಜಾಬ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದಾರೆ....ಅವರ ಸಲಹೆಗಳಿಗೆ ಮನ್ನಣೆ ಸಿಗದೇ ಹೋದರೆ, ಅವರು ಮೌನ ಅಧ್ಯಕ್ಷರಾಗಿ ಮುಂದುವರಿಯಲು ಆಗದು. ಅವರು ರಾಜೀನಾಮೆಯನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸುತ್ತೇವೆ ಹಾಗೂ ಹೈಕಮಾಂಡ್‌ ಅವರ ಅಸಮಾಧಾನವನ್ನು ಬಗೆಹರಿಸಲು ಮನವಿ ಮಾಡುತ್ತಿದ್ದೇವೆ' ಎಂದು ಕಾಂಗ್ರೆಸ್‌ ಶಾಸಕ ಸುಖಪಾಲ್‌ ಸಿಂಗ್‌ ಖೈರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.