ADVERTISEMENT

ನಿಮಗೆ ವಿಧೇಯವಾಗಿರದ ರಾಜ್ಯಗಳ ವಿರುದ್ಧ ನಿಮ್ಮದು ಕಠಿಣ ನಿಲುವು: ಸುಪ್ರೀಂಕೋರ್ಟ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 16:48 IST
Last Updated 25 ಜುಲೈ 2023, 16:48 IST
–
   

ನವದೆಹಲಿ: ‘ನಿಮಗೆ ವಿಧೇಯವಾಗಿರದ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರಸ್ವರೂಪದ ನಿಲುವುಗಳನ್ನು ಹೊಂದುವ ನೀವು, ನಿಮಗೆ ಬಾಗುವ ರಾಜ್ಯಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ ಮಂಗಳವಾರ ಚಾಟಿ ಬೀಸಿದೆ.

ನಾಗಾಲ್ಯಾಂಡ್‌ನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಜಾರಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಈ ಮಾತು ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜಯಕಿಶನ್‌ ಕೌಲ್, ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

ADVERTISEMENT

‘ನಾಗಾಲ್ಯಾಂಡ್‌ನಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸುವ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ’ ಎಂದು ನ್ಯಾಯಪೀಠ ಹೇಳಿತು.

ಆಗ, ಹೆಚ್ಚುವರಿ ಸಾಲಿಸಿಟರ್‌ ಜನರಲ್ ಕೆ.ಎಂ.ನಟರಾಜ್‌, ಈಶಾನ್ಯ ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.

‘ರಾಜಕೀಯ ದೃಷ್ಟಿಯಿಂದ ಈ ವಿಷಯದಲ್ಲಿ ಸಹಮತ ಇಲ್ಲ ಎಂದು ನೀವು ಹೇಳುವಂತಿಲ್ಲ. ಅಲ್ಲಿಯೂ ನಿಮ್ಮದೇ ಸರ್ಕಾರ ಇರುವ ಕಾರಣ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ’ ಎಂದು ನ್ಯಾಯಪೀಠ ಹೇಳಿತು.

‘ಸಂವಿಧಾನ ನೀಡಿರುವ ಮೀಸಲಾತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂಬುದಾಗಿ ನಾವು ಹೇಳುವಂತಹ ಪರಿಸ್ಥಿತಿ ನಿರ್ಮಿಸಬೇಡಿ. ಹಾಗೆ ಹೇಳುವುದು ಕಷ್ಟವೇನಲ್ಲ. ಸಂದರ್ಭ ಬಂದಲ್ಲಿ ಹೇಳುತ್ತೇವೆ’ ಎಂದು ನ್ಯಾಯಪೀಠ ಹೇಳಿತು.

ಆಗ ನಟರಾಜ್‌ ಅವರು ಕೇಂದ್ರದ ನಿಲುವನ್ನು ಪುನಃ ಸಮರ್ಥಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮಗೆ ವಿಧೇಯವಾಗಿರದ ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಕ್ರಮ ತೆಗೆದುಕೊಳ್ಳುತ್ತೀರಿ. ಆದರೆ, ನಾಗಾಲ್ಯಾಂಡ್‌ ವಿಷಯದಲ್ಲಿ ನಿಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುವಂತಿಲ್ಲ’ ಎಂದು ನ್ಯಾಯಪೀಠ ಹೇಳಿತು.

ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿ ನಾಗಾಲ್ಯಾಂಡ್‌ ಸರ್ಕಾರಕ್ಕೆ ಮತ್ತಷ್ಟು ಅವಕಾಶ ನೀಡುವಂತೆ ನಟರಾಜ್‌ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಸೆಪ್ಟೆಂಬರ್‌ ಅಂತ್ಯಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.