ಬಂಧನ
ಪ್ರಾತಿನಿಧಿಕ ಚಿತ್ರ
ಪಾರಾದೀಪ್: ಆನ್‌ಲೈನ್ ಗೇಮ್ ಆಡದಂತೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ ಕಾರಣಕ್ಕಾಗಿ, ತಂದೆ, ತಾಯಿ ಮತ್ತು ಸಹೋದರಿಯನ್ನು ಹತ್ಯೆ ಮಾಡಿರುವ ಘಟನೆ ಒಡಿಶಾದ ಜಗತ್‌ಸಿಂಗ್‌ಪುರದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿಯನ್ನು ಸೂರ್ಯಕಾಂತ್ ಸೇಥಿ (21), ಕಾಲೇಜು ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಆನ್‌ಲೈನ್ ಗೇಮ್ ಆಡದಂತೆ ಕುಟುಂಬಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ಇದರಿಂದ ವಿಪರೀತ ಕೋಪಕೊಂಡ ಸೂರ್ಯಕಾಂತ್, ತಂದೆ–ತಾಯಿ ಮತ್ತು ಸಹೋದರಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಗ್ರಾಮವೊಂದರ ಬಳಿ ತಲೆಮರೆಸಿಕೊಂಡಿದ್ದನು ಎಂದು ಪೊಲೀಸ್ ವರಿಷ್ಠಾಧಿಕಾರಿ ಭವಾನಿ ಶಂಕರ್ ಮಾಹಿತಿ ನೀಡಿದ್ದಾರೆ.
ಮೃತರನ್ನು ಪ್ರಶಾಂತ್ ಸೇಥಿ (65), ಅವರ ಪತ್ನಿ ಕನಕಲತಾ (62) ಮತ್ತು ಮಗಳು ರೊಸಾಲಿನ್ (25) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ವರಿಷ್ಠಾಧಿಕಾರಿ ಸ್ಥಳವನ್ನು ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.