ADVERTISEMENT

ಆರೋಪಿತ ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾಳಿಂದ ಕೇರಳ ಟೂರಿಸಂ ಬಗ್ಗೆ ಪ್ರಚಾರ?

ಗೂಢಚಾರಿಕೆ ಮಾಹಿತಿ ಇಲ್ಲ; ಪ್ರವಾಸೋದ್ಯಮ ಸಚಿವ ಮೊಹಮ್ಮದ್‌ ರಿಯಾಜ್‌ ಸ್ಪಷ್ಟನೆ

ಪಿಟಿಐ
Published 6 ಜುಲೈ 2025, 14:54 IST
Last Updated 6 ಜುಲೈ 2025, 14:54 IST
<div class="paragraphs"><p>ಜ್ಯೋತಿ ಮಲ್ಹೋತ್ರಾ- ಯೂಟ್ಯೂಬರ್‌</p></div>

ಜ್ಯೋತಿ ಮಲ್ಹೋತ್ರಾ- ಯೂಟ್ಯೂಬರ್‌

   

ತಿರುವನಂತಪುರಂ: ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾದ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ ಅವರನ್ನು ಈ ಹಿಂದೆ ಕೇರಳ ಪ್ರವಾಸೋದ್ಯಮ ಇಲಾಖೆಯೇ ಕರೆಸಿಕೊಂಡು ಪ್ರಚಾರದ ವಿಡಿಯೊಗಳನ್ನು ಮಾಡಿದ್ದು ತಿಳಿದುಬಂದಿದೆ.

ಇಲಾಖೆಯ ಪರವಾಗಿ ಜ್ಯೋತಿ ಸೇರಿದಂತೆ ಸಾಮಾಜಿಕ ಜಾಲತಾಣದ ಹಲವು ಇನ್‌ಫ್ಯುಯೆನ್ಸರ್‌ಗಳು ಕಳೆದೆರಡು ವರ್ಷಗಳಿಂದ ಕೆಲಸ ಮಾಡಿದ್ದರು. ಇಡೀ ರಾಜ್ಯದಾದ್ಯಂತ ಓಡಾಡಿ, ವಿಡಿಯೊ ಮಾಡಲು ಇಲಾಖೆಯೇ ಸಂಪೂರ್ಣ ಪ್ರಾಯೋಜಕತ್ವ ವಹಿಸಿತ್ತು.

ADVERTISEMENT

‘ಆಕೆಯ ವಿರುದ್ಧ ಗೂಢಚಾರಿಕೆ ಆರೋಪ ಕೇಳಿಬರುವ ಮುನ್ನವೇ ರಾಜ್ಯಕ್ಕೆ ಕರೆಸಿಕೊಳ್ಳಲಾಗಿತ್ತು. ಈ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇರಲಿಲ್ಲ’ ಎಂದು ಕೇರಳ ಪ್ರವಾಸೋದ್ಯಮ ಸಚಿವ ಮೊಹಮ್ಮದ್‌ ರಿಯಾಜ್‌ ತಿಳಿಸಿದ್ದಾರೆ.

ಮಲ್ಹೋತ್ರಾ ಕೇರಳಕ್ಕೆ ಬೇಟಿ ನೀಡಿ, ವಿಡಿಯೊ ಚಿತ್ರೀಕರಿಸಿದ್ದ ಕುರಿತು ಕೇಂದ್ರ ಗುಪ್ತಚರ ಇಲಾಖೆಯು ತನಿಖೆ ತೀವ್ರಗೊಳಿಸಿದೆ.

ಬಿಜೆಪಿ ಕಿಡಿ: ‘ಪಾಕಿಸ್ತಾನ ಪರ ಗೂಢಚಾರಿಕೆ ನಡೆಸಿದವರಿಗೆ ಸರ್ಕಾರವೇ ಪ್ರವಾಸವನ್ನು ಪ್ರಾಯೋಜಿಸಿರುವುದು ನಾಚಿಕೆಗೇಡಿನ ವಿಚಾರವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ.ಸುರೇಂದ್ರನ್‌ ಕಿಡಿಕಾರಿದ್ದಾರೆ.

ಮಲ್ಹೋತ್ರಾ ಕಳೆದ ವರ್ಷ ಕೇರಳಕ್ಕೆ ಭೇಟಿ ನೀಡಿದ್ದು, ಹಲವಾರು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೊಚ್ಚಿನ್‌ ಶಿಪ್‌ಯಾರ್ಡ್ ಜೊತೆಗೆ ಮುನ್ನಾರ್‌, ಕೋವಲಂ, ಅಲಪ್ಪುಳ, ಕೋಯಿಕ್ಕೋಡ್‌ ಜಿಲ್ಲೆಗೆ ಭೇಟಿ ನೀಡಿದ್ದು, ಇಡೀ ರಾಜ್ಯದಾದ್ಯಂತ ರೈಲಿನ ಮೂಲಕ ಪ್ರವಾಸ ಮಾಡಿದ್ದರು. ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಗೆ ಹಲವು ಯುವಕರು ಸೇರಿ ಸುದ್ದಿಯಾಗಿದ್ದ ಕಾಸರಗೋಡಿನ ಪಡನ್ನ ಗ್ರಾಮಕ್ಕೂ ಭೇಟಿ ನೀಡಿದ್ದು ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಕಂಡುಬಂದಿದೆ.

‘ಟ್ರಾವಲ್‌ ವಿಥ್‌ ಜೊ’ ಹೆಸರಿನ ಯೂಟ್ಯೂಬ್‌ ಚಾನೆಲ್‌ ಹೊಂದಿದ್ದ ಜ್ಯೋತಿ ಮಲ್ಹೋತ್ರಾ ಅವರು ಹರಿಯಾಣದವರು. ಪಾಕಿಸ್ತಾನ ಗುಪ್ತಚರ ಇಲಾಖೆ ಜೊತೆಗೂಡಿ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಕಳೆದ ಮೇ ತಿಂಗಳು ಅವರನ್ನು ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.