ADVERTISEMENT

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್‌ ಶಾ

ಮುಂಬೈ ಮೇಲಿನ ಉಗ್ರರ ದಾಳಿ: ಹುತಾತ್ಮರಿಗೆ ಗೌರವ ಸಲ್ಲಿಕೆ

ಪಿಟಿಐ
Published 26 ನವೆಂಬರ್ 2025, 16:11 IST
Last Updated 26 ನವೆಂಬರ್ 2025, 16:11 IST
ಅಮಿತ್ ಶಾ
ಅಮಿತ್ ಶಾ   

ಮುಂಬೈ/ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ. ಭಾರತ ಕೈಗೊಂಡಿರುವ ಭಯೋತ್ಪಾದನೆ ವಿರೋಧಿ ಹೋರಾಟವನ್ನು ವಿಶ್ವವೇ ಮೆಚ್ಚಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಹೇಳಿದರು.

ಮುಂಬೈ ಮೇಲಿನ ಭಯೋತ್ಪಾದಕ ದಾಳಿಗೆ 17ನೇ ವರ್ಷ ಸಂದ ಪ್ರಯುಕ್ತ, ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಿ ಅವರು ಈ ಮಾತು ಹೇಳಿದ್ದಾರೆ.

‘ಭಯೋತ್ಪಾದನೆಯು ಒಂದು ದೇಶಕ್ಕೆ ಮಾತ್ರ ಶಾಪವಲ್ಲ. ಅದು ಇಡೀ ಮಾನವ ಕುಲಕ್ಕೇ ಶಾಪವಾಗಿ ಪರಿಣಮಿಸಿದೆ’ ಎಂದೂ ಶಾ ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಕೂಡ, ಮುಂಬೈನ ಪೊಲೀಸ್‌ ಕೇಂದ್ರ ಕಚೇರಿಯಲ್ಲಿ ನಡೆದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಸಿಬ್ಬಂದಿಯ ಸ್ಮಾರಕಗಳಿಗೆ ಹೂಗುಚ್ಛವಿರಿಸಿ, ಗೌರವ ಸಲ್ಲಿಸಿದರು.

ರಾಷ್ಟ್ರಪತಿ ಸಂದೇಶ: ಮುಂಬೈ ಮೇಲಿನ ದಾಳಿಗೆ 17 ವರ್ಷ ಸಂದ ಸಂದರ್ಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ.

‘ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲ ನಾಗರಿಕರು ದೃಢಸಂಕಲ್ಪ ಮಾಡಬೇಕು’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.