ADVERTISEMENT

ಗುವಾಹಟಿಗೆ ಆಗಮಿಸಿದ ಗಾಯಕ ಜುಬೀನ್ ಗರ್ಗ್ ಪಾರ್ಥಿವ ಶರೀರ

ಪಿಟಿಐ
Published 21 ಸೆಪ್ಟೆಂಬರ್ 2025, 2:30 IST
Last Updated 21 ಸೆಪ್ಟೆಂಬರ್ 2025, 2:30 IST
   

ಗುವಾಹಟಿ: ಸಿಂಗಪುರದಲ್ಲಿ ಮೃತಪಟ್ಟ ಅಸ್ಸಾಂನ ಜನಪ್ರಿಯ ಗಾಯಕ ಜುಬೀನ್ ಗರ್ಗ್ ಅವರ ಪಾರ್ಥಿವ ಶರೀರವನ್ನು ಭಾನುವಾರ ಬೆಳಿಗ್ಗೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ತರಲಾಯಿತು. ಸಾವಿರಾರು ಅಭಿಮಾನಿಗಳು, ಕಲಾವಿದರು ತಮ್ಮ ನೆಚ್ಚಿನ ಗಾಯಕನ ದರ್ಶನ ಪಡೆಯಲು ಜಮಾಯಿಸಿದ್ದರು. ಈ ಸಂದರ್ಭ ಕೆಲಕಾಲ ಗದ್ದಲ ಉಂಟಾಗಿತ್ತು.

ಅವರ ಪತ್ನಿ ಗರಿಮಾ ಸೈಕಿಯಾ ಗರ್ಗ್ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಪಾರ್ಥಿವ ಶರೀರವನ್ನು ಸ್ವೀಕರಿಸಲು ವಿಮಾನ ನಿಲ್ದಾಣದಲ್ಲಿದ್ದರು. ಪಾರ್ಥಿವ ಶರೀರವನ್ನು ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೂವಿನಿಂದ ಅಲಂಕರಿಸಿದ ಆಂಬುಲೆನ್ಸ್‌ನಲ್ಲಿ ವಿಐಪಿ ನಿರ್ಗಮನದ ಮೂಲಕ ಹೊರಗೆ ತರಲಾಯಿತು.

ಪಾರ್ಥಿವ ಶರೀರವನ್ನು ಗರ್ಗ್ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಅಲ್ಲಿ ಅವರ 85 ವರ್ಷದ ತಂದೆ ಸೇರಿದಂತೆ ಅವರ ಕುಟುಂಬ ಸದಸ್ಯರಿಗೆ ಅಂತಿಮ ನಮನ ಸಲ್ಲಿಸಲು ಸುಮಾರು ಒಂದೂವರೆ ಗಂಟೆಗಳ ಕಾಲ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ನಂತರ, ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ಅರ್ಜುನ್ ಭೋಗೇಶ್ವರ ಬರುವಾ ಕ್ರೀಡಾ ಸಂಕೀರ್ಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಅಂತ್ಯಕ್ರಿಯೆಯ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ, ರಾಜ್ಯ ಸರ್ಕಾರವು ಗಾಯಕನ ಕುಟುಂಬ ಮತ್ತು ವಿವಿಧ ಸಂಸ್ಥೆಗಳೊಂದಿಗೆ ಸಮಾಲೋಚಿಸಲು ನಿರ್ಧರಿಸಿದೆ.

ಈಶಾನ್ಯ ಭಾರತದ ಉತ್ಸವದಲ್ಲಿ ಭಾಗವಹಿಸಲು ಸಿಂಗಪುರಕ್ಕೆ ತೆರಳಿದ್ದ ಜುಬೀನ್, ವಿಹಾರ ನೌಕೆಯಲ್ಲಿ ಪಯಣಿಸುವಾಗ ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.