
ಗುವಾಹಟಿ (ಪಿಟಿಐ): ಗಾಯಕ ಜುಬಿನ್ ಗರ್ಗ್ ಅವರ ಅಸಹಜ ಸಾವಿಗೆ ಸಂಬಂಧಿಸಿದಂತೆ ಸಿಂಗಪುರ ಪೊಲೀಸರು (ಎಸ್‌ಪಿಎಫ್) ಸಿ.ಸಿ.ಟಿ.ವಿ ದೃಶ್ಯಾವಳಿಗಳು, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಸೇರಿದಂತೆ ಹಲವು ಮಹತ್ವದ ಪುರಾವೆಗಳನ್ನು ಮುಂದಿನ 10 ದಿನಗಳಲ್ಲಿ ಒದಗಿಸುವ ಸಾಧ್ಯತೆ ಇದೆ ಎಂದು ಅಸ್ಸಾಂ ಸಿಐಡಿಯ ಹಿರಿಯ ಅಧಿಕಾರಿ ಶುಕ್ರವಾರ ತಿಳಿಸಿದ್ದಾರೆ.
ಮಾಹಿತಿ ಕಲೆಹಾಕಲು ಸಿಂಗಪುರಕ್ಕೆ ತೆರಳಿ ವಾಪಸಾದ ನಂತರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ, ಸಿಐಡಿ ಡಿಜಿಪಿ ಮುನ್ನ ಪ್ರಸಾದ್ ಗುಪ್ತ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
‘ಹಡಗಿನ ಮುಖ್ಯ ನಾವಿಕ ಮತ್ತು ಅಸ್ಸಾಂ ಸಂಘದ ಒಬ್ಬರ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ಗರ್ಗ್ ಅವರು ಉಳಿದಿದ್ದ ಸ್ಥಳಗಳಿಗೆ ಭೇಟಿ ನೀಡಿ ಹೋಟೆಲ್ ಮತ್ತು ಇತರೆ ಸ್ಥಳಗಳ ಸಿ.ಸಿ.ಟಿ.ವಿ ದೃಶ್ಯಗಳನ್ನು ಕೇಳಿದ್ದೇವೆ. 10 ದಿನಗಳಲ್ಲಿ ಎಲ್ಲ ಮಾಹಿತಿ ಒದಗಿಸುವುದಾಗಿ ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಿಂಗಪುರದ ಭಾರತೀಯ ರಾಯಭಾರಿ ಕಚೇರಿಯಿಂದಲೂ ಕಾನೂನು ಸಹಕಾರ ಕೇಳಿದ್ದೇವೆ’ ಎಂದು ಗುಪ್ತಾ ಹೇಳಿದರು.
ಗರ್ಗ್ ಅವರ ಪತ್ನಿ, ಸೋದರಿ ಸೇರಿದಂತೆ ಈವರೆಗೆ 70 ಮಂದಿ ಹೇಳಿಕೆ ಪಡೆದಿದ್ದೇವೆ. ಸಾರ್ವಜನಿಕರೂ ಪೂರಕ ಮಾಹಿತಿ ಇದ್ದರೆ ನೀಡಬಹುದು. ಮೂರು ತಿಂಗಳಲ್ಲಿ ತನಿಖೆ ಮುಗಿಯುವ ಸಾಧ್ಯತೆ ಇದೆ ಎಂದು ಹೇಳಿದರು.
ಸಂಗೀತ ಕಾರ್ಯಕ್ರಮಕ್ಕಾಗಿ ಸಿಂಗಪುರಕ್ಕೆ ತೆರಳಿದ್ದ ಜುಬೀನ್ ಗರ್ಗ್ ನಿಗೂಢ ಸಾವನ್ನಪ್ಪಿದ ನಂತರ ಅವರ ಕುಟುಂಬ ಮತ್ತು ಅಭಿಮಾನಿಗಳು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರಿಂದ ಅಸ್ಸಾಂ ಸರ್ಕಾರ ಎಸ್‌ಐಟಿ ರಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.