ADVERTISEMENT

ಜುಬಿನ್ ಗರ್ಗ್ ಸಾವಿನ ತನಿಖೆ ಮುಕ್ತ ಮತ್ತು ನ್ಯಾಯಯುತವಾಗಿರಬೇಕು: ಖರ್ಗೆ

ಪಿಟಿಐ
Published 17 ಅಕ್ಟೋಬರ್ 2025, 14:00 IST
Last Updated 17 ಅಕ್ಟೋಬರ್ 2025, 14:00 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

– ಪಿಟಿಐ ಚಿತ್ರ

ನವದೆಹಲಿ: ಸಿಂಗಪುರದಲ್ಲಿ ಮೃತಪಟ್ಟ ಅಸ್ಸಾಂ ಗಾಯಕ ಜುಬಿನ್ ಗರ್ಗ್ ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಒತ್ತಾಯಿಸಿದರು. ಅವರ ಸಾವಿನ ತನಿಖೆ ಮುಕ್ತ ಮತ್ತು ನ್ಯಾಯಯುತವಾಗಿರಬೇಕು ಎಂದರು.

ADVERTISEMENT

ಗರ್ಗ್ ಭಾರತದ ಪ್ರೀತಿಯ ಸಾಂಸ್ಕೃತಿಕ ಹೆಗ್ಗುರುತಾಗಿದ್ದು, ಅವರ ನಿಧನವು ಲಕ್ಷಾಂತರ ಅಭಿಮಾನಿಗಳ ಮೇಲೆ, ವಿಶೇಷವಾಗಿ ಅಸ್ಸಾಂ ಜನರಲ್ಲಿ ಆಳವಾದ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷವು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತದೆ. ಅವರ ಸಾವಿನ ತನಿಖೆ ಮುಕ್ತ ಮತ್ತು ನ್ಯಾಯಯುತವಾಗಿರಬೇಕು. ಅವರ ನಿಧನಕ್ಕೆ ಕಾರಣರಾದವರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

ಜುಬಿನ್ ಮತ್ತು ಅವರ ಧ್ವನಿ ಭಾರತೀಯರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿದೆ ಎಂದು ಖರ್ಗೆ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

52 ವರ್ಷದ ಜುಬಿನ್ ಗರ್ಗ್ ಅವರು 4ನೇ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಪುರಕ್ಕೆ ತೆರಳಿದ್ದಾಗ ಸೆಪ್ಟೆಂಬರ್ 19ರಂದು ಸಿಂಗಪುರದ ಸಮುದ್ರದಲ್ಲಿ ಈಜುವಾಗ ನಿಧನರಾದರು ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.

ಪ್ರಕರಣ ಕುರಿತಂತೆ ಅಸ್ಸಾಂನ ಸಿಐಡಿಯ 10 ಸದಸ್ಯರ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆ ನಡೆಸುತ್ತಿದ್ದು, ತಂಡ ಮುಂದಿನ ವಾರ ಸಿಂಗಪುರಕ್ಕೆ ತೆರಳಲಿದೆ.

ಇಂದು ಗುವಾಹಟಿಯ ಕಹಿಲಿಪಾರಾದಲ್ಲಿರುವ ಗರ್ಗ್ ಮನೆಗೆ ಭೇಟಿ ನಿಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಜುಬಿನ್ ಸಾವಿನ ಸತ್ಯ ಹೊರಬರಬೇಕೆಂದು ಕುಟುಂಬ ಒತ್ತಾಯಿಸಿದೆ ಎಂದು ರಾಹುಲ್ ತಿಳಿಸಿದರು.

‘ಜುಬಿನ್ ಕುಟುಂಬ ಮತ್ತು ಅಸ್ಸಾಂ ಜನರು ಸತ್ಯ ಮತ್ತು ನ್ಯಾಯ ಪಡೆಯಲು ಅರ್ಹರು. ಸರ್ಕಾರವು ಶೀಘ್ರ ಪಾದರ್ಶಕ ತನಿಖೆ ನಡೆಸಬೇಕು’ ಎಂದು ಖರ್ಗೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.