ADVERTISEMENT

ಗಾಯಕ ಜುಬಿನ್ ಈಜುವ ವೇಳೆ ಮುಳುಗಿ ಸಾವು, ಸ್ಕೂಬಾ ಡೈವಿಂಗ್ ವೇಳೆ ಅಲ್ಲ: ವರದಿ

ಪಿಟಿಐ
Published 2 ಅಕ್ಟೋಬರ್ 2025, 9:54 IST
Last Updated 2 ಅಕ್ಟೋಬರ್ 2025, 9:54 IST
ಗಾಯಕ ಜುಬಿನ್ ಗರ್ಗ್
ಗಾಯಕ ಜುಬಿನ್ ಗರ್ಗ್   

ಸಿಂಗಪುರ: ಗಾಯಕ ಜುಬಿನ್ ಗರ್ಗ್ ಅವರು ಸಿಂಗಪುರದ ದ್ವೀಪದಲ್ಲಿ ಈಜುವಾಗ ಮುಳುಗಿ ಸಾವಿಗೀಡಾಗಿದ್ದಾರೆಯೇ ಹೊರತು ಈ ಹಿಂದೆ ವರದಿಯಾದಂತೆ ಸ್ಕೂಬಾ ಡೈವಿಂಗ್ ಮಾಡುವಾಗ ಅಲ್ಲ ಎಂದು ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ.

ಭಾರತ–ಸಿಂಗಪುರ ರಾಜತಾಂತ್ರಿಕ ಸಂಬಂಧಗಳ 60ನೇ ವರ್ಷ ಮತ್ತು ಭಾರತ ಆಸಿಯಾನ್ ಪ್ರವಾಸೋದ್ಯಮ ವರ್ಷ, ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಪುರಕ್ಕೆ ತೆರಳಿದ್ದ ಅಸ್ಸಾಂ ಮೂಲದ ಗರ್ಗ್ ಸೆಪ್ಟೆಂಬರ್ 19ರಂದು ಮೃತಪಟ್ಟಿದ್ದರು.

ಗರ್ಗ್ ಸಾವಿನ ಕುರಿತಾದ ಪ್ರಾಥಮಿಕ ತನಿಖೆ, ಮರಣೋತ್ತರ ಪರೀಕ್ಷೆ ವರದಿಯ ಪ್ರತಿಯನ್ನು ಭಾರತದ ಹೈಕಮಿಷನ್‌ ಅವರಿಗೆ ನೀಡಲಾಗಿದೆ ಎಂದು ಸಿಂಗಪುರ ಪೊಲೀಸ್ ಪಡೆ (ಎಸ್‌ಪಿಎಫ್) ತಿಳಿಸಿದೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ADVERTISEMENT

ವರದಿಯನ್ನು ಸ್ವೀಕರಿಸಿರುವುದಾಗಿ ಭಾರತೀಯ ಹೈಕಮಿಷನ್ ದೃಢಪಡಿಸಿದೆ.

ಮೂಲವೊಂದರ ಪ್ರಕಾರ, ಗರ್ಗ್ ನೀರಿನಲ್ಲಿ ಮುಳುಗಿ ಸಾವಿಗೀಡಾದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

52 ವರ್ಷದ ಗಾಯಕರ ಸಾವಿನ ಹಿಂದೆ ಯಾವುದೇ ಕೈವಾಡ, ಸಂಚಿನ ಸಾಧ್ಯತೆಗಳನ್ನು ಎಸ್‌‍ಪಿಎಫ್ ತಳ್ಳಿಹಾಕಿತ್ತು.

ಸಿಂಗಪುರ ಡೈಲಿ ಪ್ರಕಾರ, ಎಸ್‌ಪಿಎಫ್‌ನ ಆರಂಭಿಕ ಹೇಳಿಕೆಯ ಪ್ರಕಾರ ಗಾರ್ಗ್ ಕೊಲೆಯಾಗಿದ್ದಾರೆ ಅಥವಾ ಯಾವುದೇ ಕುಕೃತ್ಯ ನಡೆದಿದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ.

ಸೆಪ್ಟೆಂಬರ್ 19ರಂದು, ಗರ್ಗ್ ಸಿಂಗಪುರದ ಸೇಂಟ್ ಜಾನ್ಸ್ ದ್ವೀಪದಲ್ಲಿದ್ದರು. ಅಲ್ಲಿಂದ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ನೀರಿನಿಂದ ಹೊರತೆಗೆದು ಸಿಂಗಾಪುರ ಜನರಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅದೇ ದಿನ ಅವರು ನಿಧನರಾದರು.

ಜುಬಿನ್ ಗರ್ಗ್ ಸಾವಿನ ಕುರಿತ ತನಿಖೆಗೆ ಭಾರತ ಸರ್ಕಾರ ಸಿಂಗಪುರವನ್ನು ಒತ್ತಾಯಿಸಿತ್ತು.

‘ಗರ್ಗ್ ಮುಳುಗಿ ಮೃತಪಡಲು ಕಾರಣವಾದ ಅಂಶಗಳ ಮೇಲೆ ತನಿಖಾಧಿಕಾರಿಯ ವಿಚಾರಣೆಯು ಬೆಳಕು ಚೆಲ್ಲುವ ಸಾಧ್ಯತೆಯಿದೆ’ ಎಂದು ಎಲ್‌ಐಎಂಎನ್‌ ಲಾ ಕಾರ್ಪೊರೇಷನ್‌ನ ಸಹ ನಿರ್ದೇಶಕ ಎನ್‌ಜಿ ಕೈ ಲಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಿಂಗಪುರದ ಮಾಧ್ಯಮವೊಂದು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.