
ಗುವಾಹಟಿ: ಸಿಂಗಪುರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ ಸಂಭವಿಸಿದ ಗಾಯಕ ಜುಬಿನ್ ಗರ್ಗ್ ಅವರ ಸಾವು ‘ಸ್ಪಷ್ಟವಾಗಿ ಒಂದು ಕೊಲೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.
ಗರ್ಗ್ ಅಸಹಜ ಸಾವಿನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿಗಣಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಅಸ್ಸಾಂ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ‘ಇದೊಂದು ಉದ್ದೇಶಪೂರ್ವಕ ಮಾನವ ಹತ್ಯೆ ಅಲ್ಲ. ಆದರೆ, ಸಷ್ಟವಾಗಿ ಇದೊಂದು ಕೊಲೆ. ಹಾಗಾಗಿಯೇ ಬಿಎನ್‌ಎಸ್ ಸೆಕ್ಷನ್ 103 ಅನ್ನು ಈ ಪ್ರಕರಣಕ್ಕೆ ಸೇರಿಸಲಾಗಿದೆ’ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಗರ್ಗ್ ಸಾವಿನ ಬಗ್ಗೆ ಚರ್ಚಿಸಲು ಅವಕಾಶ ಕೋರಿ ಅಸ್ಸಾಂ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿದ ನಿಲುವಳಿ ಸೂಚನೆಯನ್ನು ಮಾನ್ಯ ಮಾಡಲಾಯಿತು. ವಿರೋಧ ಪಕ್ಷದ ನಾಯಕ ದೇವವ್ರತ್ ಸೈಕಿಯಾ ಮತ್ತು ಶಾಸಕ ಅಖಿಲ್ ಗೊಗೊಯ್ ಅವರು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದರು.
‘ಎಸ್‌ಐಟಿ ಅಧಿಕಾರಿಗಳು ಇದುವರೆಗೆ ಏಳು ಜನರನ್ನು ಬಂಧಿಸಿದ್ದಾರೆ. 252 ಸಾಕ್ಷ್ಯಗಳ ಪರಿಶೀಲನೆ ನಡೆದಿದೆ. 29 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಲ್ಲಿ ಒಬ್ಬರು ಗರ್ಗ್ ಅವರ ಹತ್ಯೆ ಮಾಡಿದ್ದಾರೆ. ಇನ್ನುಳಿದವರು ಇದಕ್ಕೆ ಸಹಕಾರ ನೀಡಿದ್ದಾರೆ. ಈಗಾಗಲೇ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ’ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದರು.
ಸೆಪ್ಟೆಂಬರ್ 19ರಂದು ಜುಬಿನ್ ಸಾವು ಸಂಭವಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.