ಬೆಂಗಳೂರು: ರಾಜ್ಯದ ಆಯ್ದ ನಾಲ್ಕು ಜಿಲ್ಲೆಗಳ ಒಟ್ಟು 2,635 ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಅಡಿ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮುಂಬೈ ಮೂಲದ ವೇದಾಂತ ಪ್ರತಿಷ್ಠಾನ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿವೆ.
ಈ ಒಪ್ಪಂದದ ಅನ್ವಯ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳ ಅಂಗನವಾಡಿಯ ಮಕ್ಕಳಿಗೆ ಪೌಷ್ಟಿಕ ಆಹಾರ, ಸಮವಸ್ತ್ರ, ಪಾದರಕ್ಷೆ, ವಾರಕ್ಕೊಮ್ಮೆ ಮೊಟ್ಟೆ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು ಎಂದು ಪ್ರತಿಷ್ಠಾನದ ಸಿಇಒ ರವಿಕೃಷ್ಣನ್ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಪ್ಪಂದದ ಅನುಷ್ಠಾನಕ್ಕೆ ಪ್ರತಿ ವರ್ಷ 12 ಕೋಟಿ ರೂಪಾಯಿಯನ್ನು ಪ್ರತಿಷ್ಠಾನ ಮುಂದಿನ ಐದು ವರ್ಷಗಳವರೆಗೆ ವೆಚ್ಚ ಮಾಡಲಿದೆ. ಇದೇ ಮಾದರಿಯ ಒಪ್ಪಂದವನ್ನು ರಾಜಸ್ತಾನ, ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯ ಸರ್ಕಾರಗಳ ಜೊತೆ ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಐಸಿಡಿಎಸ್ ಯೋಜನೆಯಡಿ ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರಕ್ಕೆ ವೇದಾಂತ ಪ್ರತಿಷ್ಠಾನ ಹಣಕಾಸಿನ ನೆರವು ನೀಡುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ. ಝಳಕಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.