ADVERTISEMENT

ಅಂತರಸಂತೆ ವಲಯದಲ್ಲಿ ಹುಲಿ, ಆನೆ ಸಾವು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಎಚ್.ಡಿ.ಕೋಟೆ:  ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವಲಯದಲ್ಲಿ ಶುಕ್ರವಾರ ನಸುಕಿನಲ್ಲಿ ಹುಲಿ ಮತ್ತು ಆನೆ ಪ್ರತ್ಯೇಕ ಸ್ಥಳದಲ್ಲಿ ಮೃತಪಟ್ಟಿವೆ.

ಅಂದಾಜು 2 ವರ್ಷದ ಗಂಡು ಹುಲಿ ಗೇರುಪಾಪ್ ಕೊಳಚೀಕೆರೆ ದಡದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದೆ. ಹುಲಿಯ ಕುತ್ತಿಗೆ ಭಾಗದಲ್ಲಿ ಮತ್ತೊಂದು ಹುಲಿ ಕಚ್ಚಿರುವ ಗುರುತಾಗಿದ್ದು, ಹುಲಿಗಳ ಕಾದಾಟದಲ್ಲಿ ಇದು ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
 
ಆದರೆ ಕತ್ತು ಹೊರತುಪಡಿಸಿ ಹುಲಿಯ ದೇಹದ ಯಾವುದೇ ಭಾಗಕ್ಕೂ ಗಾಯಗಳಾಗಿಲ್ಲ. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಹುಣಸೂರು ವನ್ಯಜೀವಿ ವಲಯದ ಡಾ.ಉಮಾಶಂಕರ್ ಹುಲಿಯ ಮರಣೋತ್ತರ ಪರೀಕ್ಷೆ ನಸಿದರು. ಈ ಹುಲಿ  ಎರಡು ದಿನಗಳಿಂದ ಆಹಾರವನ್ನು ಸೇವಿಸದೇ ಇರುವುದು ಗಮನಕ್ಕೆ ಬಂದಿದೆ. ಹಲ್ಲುಗಳು ಮತ್ತು ಉಗುರುಗಳು ಗಟ್ಟಿಯಾಗಿವೆ.
 
ಮತ್ತೊಂದೆಡೆ, ಅಂತರಸಂತೆ ವಲಯದ ಉದ್ಬೂರು ಬೀಟ್ ಬಳಿ ಸುಮಾರು 30 ವರ್ಷದ ಹೆಣ್ಣಾನೆ ಅನಾರೋಗ್ಯದಿಂದ ಮೃತಪಟ್ಟಿದೆ. ಈ ಆನೆ ಕೂಡ ಗುರುವಾರ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಒಂದು ತಿಂಗಳ ಹಿಂದೆ ಮರಿ ಹಾಕಿದ ಇದರ ಇದರ ಹೊಟ್ಟೆಯಲ್ಲಿ ಹುಳುಗಳು ಬಿದ್ದಿದ್ದು, ಇದೇ ಕಾರಣದಿಂದ ಸತ್ತಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಎರಡೂ ಪ್ರಾಣಿಗಳ ಮರಣೋತ್ತರ ಪರೀಕ್ಷೆಯ ವರದಿಯನ್ನು ಹೆಚ್ಚಿನ ಮಾಹಿಗಾಗಿ ವಿಧಿವಿಜ್ಞಾನ ಇಲಾಖೆಗೆ ಕಳುಹಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪೂವಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.