ADVERTISEMENT

‘ಅಂದುಕೊಂಡಂತೆ ಗೌರಿ ಹತ್ಯೆ, ಭಗವಾನ್ ಮೇಲೆ ಕಣ್ಣಿಡು’: ಸಂಚು ಬಿಚ್ಚಿಟ್ಟ ಆರೋಪಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ನವೀನ್
ನವೀನ್   

ಬೆಂಗಳೂರು: ‘ಗೌರಿ ಲಂಕೇಶ್ ಹತ್ಯೆ ನಂತರ, 2017ರ ಅಕ್ಟೋಬರ್‌ನಲ್ಲಿ ಮಂಡ್ಯ ಬಸ್‌ ನಿಲ್ದಾಣದಲ್ಲಿ ಪ್ರವೀಣ್‌ನನ್ನು ಭೇಟಿಯಾಗಿದ್ದೆ. ಹತ್ಯೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ, ‘ಅದೆಲ್ಲ ಈಗ ಬೇಡ. ಅಂದುಕೊಂಡಂತೆ ಗೌರಿ ಹತ್ಯೆಯಾಗಿದೆ. ನಮ್ಮ ಮುಂದಿನ ಗುರಿ ಮೈಸೂರಿನ ಭಗವಾನ್. ಆತನ ಮೇಲೆ ಕಣ್ಣಿಡು’ ಎಂದು ಆತ ಹೇಳಿದ್ದ’.

ಇದು. ಪ್ರಕರಣದ ಆರೋಪಿ ಕೆ.ಟಿ.ನವೀನ್‌ಕುಮಾರ್‌, ಎಸ್‌ಐಟಿ ಅಧಿಕಾರಿಗಳಿಗೆ ನೀಡಿರುವ ಹೇಳಿಕೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

‘ಬಾಲ್ಯದಿಂದಲೇ ಹಿಂದೂ ಧರ್ಮದ ಬಗ್ಗೆ ಕಾಳಜಿ ಇತ್ತು. ಅದಕ್ಕಾಗಿ ಬಿ.ಕಾಂ ಅರ್ಧಕ್ಕೆ ಬಿಟ್ಟೆ. ಪ್ರಮೋದ್ ಮುತಾಲಿಕ್ ಹಾಗೂ ಮಂಗಳೂರಿನ ಪ್ರಭಾಕರ್ ಶೆಟ್ಟಿ ಪರಿಚಯವಾಯಿತು. ಮುತಾಲಿಕ್, ಬಜರಂಗ ದಳ ಬಿಟ್ಟು ಶ್ರೀರಾಮ ಸೇನೆ ಸೇರಿದಾಗ ನಾನು ಜತೆಗೆ ಹೋದೆ. ಮದ್ದೂರಿನಲ್ಲಿ ಆ ಸಂಘಟನೆ ಬೆಳೆಸಿದೆ.’

ADVERTISEMENT

‘ನಂತರ, ನನ್ನದೇ ಮುಂದಾಳತ್ವದಲ್ಲಿ ‘ಹಿಂದೂ ಯುವಸೇನೆ’ ಆರಂಭಿಸಿದೆ. ‘ಜಾಗೋ ಹಿಂದೂ ಮದ್ದೂರು’, ‘ಹಿಂದೂ ಯುವ ಸೇನೆ’, ‘ಭಜರಂಗಿ ಮದ್ದೂರು’, ‘ಕಾವೇರಿ ಕೊಳ್ಳದ ಹುಡುಗರು’ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ಮಾಡುವಂತೆ ಸಂದೇಶ ಕಳುಹಿಸುತ್ತಿದ್ದೆ. ಹಿಂದೂ ಜನಜಾಗೃತಿ ಸಮಿತಿಯ ಮೋಹನ್‌ಗೌಡ ಆಹ್ವಾನದ ಮೇರೆಗೆ, ಬೆಂಗಳೂರಿನ ವಿಜಯನಗರದಲ್ಲಿರುವ ಮಠವೊಂದರಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದೆ’

‘2017ರ ಜೂನ್‌ನಲ್ಲಿ ಗೋವಾದ ಪೊಂಡಾದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಮಾವೇಶದಲ್ಲಿ ಪಾಲ್ಗೊಂಡಿದ್ದೆ. ‘ಧರ್ಮ ರಕ್ಷಣೆಗಾಗಿ ಶಸ್ತ್ರ ಸಜ್ಜಿತವಾಗಿ ಹೋರಾಡಬೇಕು. ನನ್ನ ಬಳಿ ಗನ್‌ ಹಾಗೂ ಬುಲೆಟ್‌ಗಳಿವೆ’ ಎಂದು ಭಾಷಣ ಮಾಡಿದ್ದೆ. ಮುಖಂಡರೆಲ್ಲ ಮೆಚ್ಚಿದ್ದರು. ಮೋಹನ್‌ಗೌಡ, ‘ನಿನ್ನಂಥ ಮನಸ್ಥಿತಿ ಇರುವ ವ್ಯಕ್ತಿಗಳು ಇಲ್ಲಿ ಇದ್ದಾರೆ. ಮುಂದಿನ ದಿನಗಳಲ್ಲಿ ಅವರು ನಿನ್ನನ್ನು ಸಂಪರ್ಕಿಸುತ್ತಾರೆ’ ಎಂದಿದ್ದರು.‘

‘ಕೆಲ ದಿನಗಳ ನಂತರ, ಕಾಯಿನ್ ಬೂತ್‌ನಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಹಿಂದೂ ಮಜ್ದೂರ್ ಕಿಸಾನ್ ಸಂಘಟನೆಯವ ಎಂದು ಪರಿಚಯಿಸಿಕೊಂಡಿದ್ದ. ಹೆಸರು ಕೇಳಿದಾಗ, ಪ್ರವೀಣ್ (ಅದು ಆತನ ನಿಜವಾದ ಹೆಸರೇ ಅಥವಾ ಅಲ್ಲವೇ ಎಂಬುದು ನನಗೆ ಗೊತ್ತಿಲ್ಲ) ಎಂದಿದ್ದ. ‘ನಿನ್ನನ್ನು ಭೇಟಿಯಾಗಬೇಕು’ ಎಂದಿದ್ದ. ಆತನನ್ನು ಮದ್ದೂರಿಗೆ ಕರೆಸಿದ್ದೆ. ‘ಹಿಂದೂ ಧರ್ಮ ರಕ್ಷಣೆಗಾಗಿ ಗನ್ ಹಾಗೂ ಬುಲೆಟ್‌ಗಳು ಬೇಕಾಗಿವೆ’ ಎಂದು ಆತ ಹೇಳಿದ್ದ. ನನ್ನ ಬಳಿಯ ಬುಲೆಟ್‌ಗಳನ್ನು ತೋರಿಸಿದ್ದೆ. ಅವುಗಳಲ್ಲಿ ಒಂದೆರೆಡು ಬುಲೆಟ್‌ಗಳನ್ನು ಆತ ತೆಗೆದುಕೊಂಡು ಹೋದ.‘

‘ಸೆಪ್ಟೆಂಬರ್ 5ರಂದು ರಮಾನಂದಣ್ಣ ಆಹ್ವಾನದ ಮೇರೆಗೆ, ದಂಪತಿ ಸಮೇತ ಮಂಗಳೂರಿಗೆ ಹೋದೆವು. ಉರ್ವ ಆಶ್ರಮದಲ್ಲಿ ಉಳಿದುಕೊಂಡಿದ್ದೆವು. ಮಾರನೇ ದಿನ ಟಿ.ವಿ ಹಾಗೂ ದಿನಪತ್ರಿಕೆಗಳನ್ನು ನೋಡಿದಾಗಲೇ, ಗೌರಿ ಹತ್ಯೆ ವಿಷಯ ತಿಳಿಯಿತು. ರಮಾನಂದಣ್ಣನನ್ನು ಕೇಳಿದ್ದಕ್ಕೆ, ನಕ್ಕು ಸುಮ್ಮನಾದರು. ಪ್ರವೀಣ್‌ನೇ ಬೇರೆ ಕಡೆ ಗನ್ ಹಾಗೂ ಬುಲೆಟ್ ಹೊಂದಿಸಿಕೊಂಡು ಹತ್ಯೆ ಮಾಡಿಸಿರಬಹುದೆಂದು ಸುಮ್ಮನಾದೆ.’

‘ಕೆಲ ದಿನಗಳ ನಂತರ ಪ್ರವೀಣ್, ಗನ್‌ ಹಾಗೂ ಬುಲೆಟ್‌ಗಾಗಿ ಮೇಲಿಂದ ಮೇಲೆ ಕರೆ ಮಾಡುತ್ತಿದ್ದ. 2018ರ ಜನವರಿ 10ರಂದು ಆತನನ್ನು ಮದ್ದೂರಿಗೆ ಕರೆಸಿಕೊಂಡಿದ್ದೆ. ಆತನ ಜತೆ ಮೂವರು ಬಂದಿದ್ದರು. ‘ಗನ್‌ ಬೇಕಿದೆ’ ಎಂದು ಪದೇ ಪದೇ ಹೇಳುತ್ತಿದ್ದರು. ನನ್ನ ಬಳಿ ಗನ್‌ ಇರದಿದ್ದರಿಂದ ಕೊಡಲು ಆಗಲಿಲ್ಲ. ಅವರೆಲ್ಲ ವಾಪಸ್‌ ಹೋದರು. ನಂತರ ಪ್ರವೀಣ್, ಹಲವು ಬಾರಿ ಕರೆ ಮಾಡಿದ. ನಾನು ಸ್ವೀಕರಿಸಲಿಲ್ಲ. ಕೆಲವೇ ದಿನಗಳಲ್ಲಿ ಉಪ್ಪಾರಪೇಟೆ ಪೊಲೀಸರು, ನನ್ನನ್ನು ಬಂಧಿಸಿದರು.’ ಎಂದು ಆತ ತಿಳಿಸಿದ್ದಾನೆ.
*
‘ಬೆಳಗಾವಿಯಲ್ಲಿ ಭೇಟಿಯಾದವರು, ಗನ್‌– ಬುಲೆಟ್‌ ಕೇಳಿದರು’ 
‘ನವೆಂಬರ್‌ನಲ್ಲಿ ಕರೆ ಮಾಡಿದ್ದ ಪ್ರವೀಣ್, ‘ಬೆಳಗಾವಿಯಲ್ಲಿ ನಮ್ಮ ಸಂಘಟನೆಯ ಹಿರಿಯರೊಬ್ಬರು ನಿನ್ನನ್ನು ಭೇಟಿ ಮಾಡಬೇಕಂತೆ. ಹೋಗು’ ಎಂದಿದ್ದ. ನವೆಂಬರ್ 7ರಂದು ಬೆಳಗಾವಿಗೆ ಹೋಗಿ, ಯಾತ್ರಿ ನಿವಾಸದ ಅರಳಿ ಮರದ ಕೆಳಗೆ ನಿಂತಿದ್ದೆ. ಮಾರುತಿ 800 ಕಾರಿನಲ್ಲಿ ಬಂದಿದ್ದ ಇಬ್ಬರು, ನನ್ನನ್ನು ಹತ್ತಿಸಿಕೊಂಡು ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿಸಿದರು. ಕಾರಿನ ಹಿಂಬದಿಯಲ್ಲಿ ಕೇಸರಿ ಬಣ್ಣದ ಕುದುರೆ ರಥದಲ್ಲಿರುವ ಶ್ರೀಕೃಷ್ಣನ ಚಿತ್ರಣವಿತ್ತು’ ಎಂದು ನವೀನ್ ಹೇಳಿಕೆಯಲ್ಲಿ ತಿಳಿಸಿದ್ದಾನೆ.

‘ಅದರಲ್ಲಿದ್ದ ವ್ಯಕ್ತಿ, ‘ಒಂದು ಗನ್ ಹಾಗೂ ಬುಲೆಟ್‌ಗಳು ಬೇಕು. ಬೆಲೆ ಎಷ್ಟು’ ಎಂದಿದ್ದ. ಗನ್‌ ಬೆಲೆ ₹1.75 ಲಕ್ಷದಿಂದ ₹2 ಲಕ್ಷ. 50 ಗುಂಡುಗಳ ಬೆಲೆ ₹40 ಸಾವಿರ ಎಂದಿದ್ದೆ. ‘ಗುಂಡುಗಳು ಬೇಡ. ಗನ್‌ ಸಾಕು’ ಎಂದಿದ್ದ. ಮೈಸೂರಿನ ಭಗವಾನ್ ಬಗ್ಗೆಯೂ ಕೇಳಿದ್ದ. ಅವರು ಸಾಹಿತಿ, ಹಿಂದೂ ಧರ್ಮದ ವಿರುದ್ಧವಾಗಿ ಮಾತನಾಡುತ್ತಾರೆ ಎಂದಿದ್ದೆ. ‘ಭಗವಾನ್‌ನನ್ನು ಮುಗಿಸೋಣ. ಅವರ ಮನೆ ಸುತ್ತಲೂ ನಿಗಾ ಇಡು’ ಎಂದು ಆತ ಹೇಳಿದ್ದ’ ಎಂದು ಆತ ವಿವರಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.