ADVERTISEMENT

ಅಕ್ರಮ ಗಣಿಗಾರಿಕೆಗೆ ದಂಡ ಇಲ್ಲ!

ಸಂದೀಪ್ ಮೌದ್ಗಲ್
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಅಕ್ರಮ ನಡೆಸಿದ ‘ಸಿ’ ಪ್ರವರ್ಗದ ಗಣಿ ಕಂಪೆನಿಗಳಿಗೆ ಚಿತ್ರದುರ್ಗ, ಬಳ್ಳಾರಿ ಮತ್ತು ತುಮಕೂರಿನಲ್ಲಿ ನೀಡಿದ್ದ ಪರವಾನಗಿ ರದ್ದು ಮಾಡುವುದು ಸರ್ಕಾರದ ಪಾಲಿಗೆ ನೈತಿಕ ಜಯ ಆಗಿರಬಹುದು. ಆದರೆ ಈ 51 ಕಂಪೆನಿಗಳು ತಾವು ನಡೆಸಿದ ಅಕ್ರಮಕ್ಕೆ ಯಾವುದೇ ದಂಡ ತೆರದೆ ನುಣುಚಿಕೊಳ್ಳಲಿವೆ.

ಭಾರಿ ಪ್ರಮಾಣದಲ್ಲಿ ಅಕ್ರಮ ನಡೆಸಿದ 51 ಗಣಿ ಕಂಪೆನಿಗಳ ಗುತ್ತಿಗೆ ರದ್ದು ಮಾಡುವ ಸರ್ಕಾರದ ಅವಸರದ ತೀರ್ಮಾನ ತಮ್ಮನ್ನು ಮೂಕ­ರನ್ನಾಗಿಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ನೈಸರ್ಗಿಕ ಸಂಪನ್ಮೂಲವನ್ನು ಕೊಳ್ಳೆ ಹೊಡೆದ ಕಂಪೆನಿಗಳಿಗೆ ಸರ್ಕಾರ ಯಾವುದೇ ದಂಡ ವಿಧಿಸದಿರುವುದು ಆಶ್ಚರ್ಯ ತಂದಿದೆ ಎಂದೂ ಅವರು ಹೇಳುತ್ತಿದ್ದಾರೆ.

ಅತ್ಯಂತ ಹೆಚ್ಚಿನ ಪ್ರಮಾಣದ ಅವ್ಯವಹಾರ ನಡೆಸಿದ ‘ಸಿ‘ ಪ್ರವರ್ಗದ ಗಣಿ ಕಂಪೆನಿಗಳು ಯಾವುದೇ ದಂಡ ತೆರುವ ಅಗತ್ಯವಿಲ್ಲ. ಆದರೆ ಇದಕ್ಕಿಂತ ಕಡಿಮೆ ಪ್ರಮಾಣ ಅಕ್ರಮ ನಡೆಸಿದ ‘ಎ’ ಮತ್ತು ‘ಬಿ’ ಪ್ರವರ್ಗದ ಕಂಪೆನಿಗಳು ದಂಡ ತೆರಬೇಕಾದ ಪರಿಸ್ಥಿತಿಯಲ್ಲಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಎ, ಬಿ ಮತ್ತು ಸಿ ಪ್ರವರ್ಗದ ಕಂಪೆನಿಗಳ ಪೈಕಿ ‘ಸಿ‘ ಪ್ರವರ್ಗಕ್ಕೆ ಸೇರಿದ ಕಂಪೆನಿಗಳು ಅತ್ಯಂತ ಹೆಚ್ಚಿನ ಅಕ್ರಮಗಳನ್ನು ನಡೆಸಿವೆ. ಎ ಮತ್ತು ಬಿ ಪ್ರವರ್ಗದ ಕಂಪೆನಿಗಳು ಅರಣ್ಯ ಪರಿಹಾರ ನಿಧಿಗೆ ಹಣ ಪಾವತಿ ಮಾಡಬೇಕು ಎಂದು ಸರ್ಕಾರ ಹೇಳಿದೆ. ಆದರೆ ‘ಸಿ‘ ಪ್ರವರ್ಗದವರಿಗೆ ಈ ನಿಬಂಧನೆ ಇಲ್ಲ.

‘ಪರವಾನಗಿ ರದ್ದು ಮಾಡಿರುವುದೇ ಸಿ ವರ್ಗದ ಕಂಪೆನಿಗಳಿಗೆ ನೀಡಿರುವ ದೊಡ್ಡ ಪೆಟ್ಟು. ಅವುಗಳಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟ ಭರ್ತಿ ಮಾಡುವ ಸಂಬಂಧ ನಾವು ಮುಂದೆ ಸಿವಿಲ್‌ ಮೊಕದ್ದಮೆ ಹೂಡಲಿದ್ದೇವೆ’ ಎಂದು ಗಣಿ ಇಲಾಖೆ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ತಿಳಿಸಿದರು.

ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಅನುಸಾರ 51 ಕಂಪೆನಿಗಳ ಗಣಿ ಗುತ್ತಿಗೆ ರದ್ದು ಮಾಡಲಾಗಿದೆ. ಕೋರ್ಟ್‌ ನೀಡಿರುವ ಆದೇಶದಂತೆ ಕ್ರಮ ಜರುಗಿಸದಿದ್ದರೆ ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸ­ಬೇಕಾಗುತ್ತದೆ ಎಂದು  ಗಿರಿನಾಥ್‌ ಅವರು ಸರ್ಕಾರದ ಕ್ರಮ ಸಮರ್ಥಿಸಿ­ಕೊಂಡರು.

‘ಮೂರು ಜಿಲ್ಲೆಗಳಲ್ಲಿ ನಡೆದಿರುವ ಗಣಿಗಾರಿಕೆಯ ಪ್ರಮಾಣ ಅಂದಾಜಿ­ಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ, ಅಕ್ರಮ ನಡೆಸಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಪ್ರತಿಯೊಂದು ಅದಿರು ಹೊಂಡದ ಗಣಿಗಾರಿಕೆ ಅಂದಾಜು ಮಾಡಲು ಕನಿಷ್ಠ 10 ದಿನ ಬೇಕು. ಇದಕ್ಕೆ ವಿಶೇಷವಾದ ಯಂತ್ರಗಳು ಬೇಕು. ಇದು ರಾಷ್ಟ್ರದ ನಾಲ್ಕು ಕಂಪೆನಿಗಳ ಬಳಿ ಲಭ್ಯವಿದೆ. ಆ ಕಂಪೆನಿಗಳ ಸಹಾಯ ಪಡೆದು, ನಷ್ಟದ ಅಂದಾಜು ಮಾಡಲಾಗುವುದು’ ಎಂದು ಅವರು ಹೇಳಿದರು.

ಅಕ್ರಮ ಗಣಿಗಾರಿಕೆ ಕುರಿತು ಅಧ್ಯಯನ ನಡೆಸಿದ್ದ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ), ಅಕ್ರಮ ನಡೆಸಿ ನಷ್ಟ ಉಂಟು ಮಾಡಿದವರಿಂದ, ನಷ್ಟದ ಪ್ರಮಾಣ­ಕ್ಕಿಂತ ಐದು ಪಟ್ಟು ಹೆಚ್ಚು ದಂಡ ವಸೂಲು ಮಾಡಬೇಕು ಎಂದು ತನ್ನ ಒಂದು ವರದಿಯಲ್ಲಿ ಶಿಫಾರಸು ಮಾಡಿತ್ತು.
‘ಸಿಇಸಿ ಹೇಳಿದ ಪ್ರಮಾಣದಲ್ಲಿ ದಂಡ ವಿಧಿಸಲು ಸಾಧ್ಯವೇ?’ ಎಂಬ ಪ್ರಶ್ನೆಗೆ, ‘ಈ ಕುರಿತು ನಾವು ಏನೂ ಹೇಳಲಾಗದು. ನ್ಯಾಯಾಲಯ ನೀಡುವ ನಿರ್ದೇಶನ ಪಾಲಿಸುತ್ತೇವೆ’ ಎಂದು ಉತ್ತರಿಸಿದರು.

ಅಕ್ರಮದಿಂದ ಆಗಿರುವ ನಷ್ಟ ಅಂದಾಜಿ­ಸಿದ ನಂತರ, ಅದನ್ನು ಉನ್ನತಾಧಿಕಾರ ಸಮಿತಿ ಎದುರು ಮಂಡಿಸಲಾಗುವುದು. ಈ ವಿವರನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ಮುನ್ನ ಸಮಿತಿಯ ಅಭಿಪ್ರಾಯ ಪಡೆಯಲಾ­ಗುವುದು ಎಂದು ಮೂಲಗಳು ತಿಳಿಸಿವೆ.

ಪಾರಾದ ಪ್ರಭಾವಿಗಳು
ಮಾಜಿ ಸಚಿವ ವಿ. ಸೋಮಣ್ಣ ಪುತ್ರರು ಪಾಲು ಹೊಂದಿರುವ ಮಾತಾ ಮಿನರಲ್ಸ್‌, ಶಾಸಕ ಅನಿಲ್‌ ಲಾಡ್‌ ಒಡೆತನದ ವಿ.ಎಸ್‌. ಲಾಡ್‌ ಅಂಡ್‌ ಸನ್ಸ್‌ ಕಂಪೆನಿ, ಮೈಸೂರು ಮಿನರಲ್ಸ್‌ ಲಿಮಿಟೆಡ್‌ (ಎಂಎಂಎಲ್‌), ಮಾಜಿ ಸಚಿವ ಆನಂದ ಸಿಂಗ್‌ ಒಡೆತನದ ಎಸ್‌ಬಿ ಮಿನರಲ್ಸ್‌, ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್‌ ಮೈನಿಂಗ್‌ ಕಂಪೆನಿ, ಅಂಬಿಕಾ ಘೋರ್ಪಡೆ ಮತ್ತು ಯೋಗೇಂದ್ರನಾಥ ಸಿಂಗ್‌ ಒಡೆತನದ ಹೊತ್ತೂರು ಟ್ರೇಡರ್ಸ್‌ ಕಂಪೆನಿಗಳು ‘ಸಿ’ ಪ್ರವರ್ಗದ ಅಡಿ ಬರುತ್ತವೆ. ಇವುಗಳಿಗೆ ಒಂದು ಪೈಸೆಯಷ್ಟೂ ದಂಡ ವಿಧಿಸಿಲ್ಲ.

ಈ 51 ಕಂಪೆನಿಗಳು ಅರಣ್ಯ ಅಭಿವೃದ್ಧಿ ತೆರಿಗೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೀಡಬೇಕಿರುವ ತೆರಿಗೆಯನ್ನೂ ಪಾವತಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.