ವಿಜಾಪುರ: ಅಂಬೇಡ್ಕರ ವೃತ್ತ, ಬಸ್ ನಿಲ್ದಾಣ, ಸಿದ್ದೇಶ್ವರ ದೇವಸ್ಥಾನ ಹೀಗೆ ಮೂರು ಕಡೆಗಳಿಂದ ಬೆಳಿಗ್ಗೆ 9 ಗಂಟೆಗೆ ಏಕಕಾಲಕ್ಕೆ ಪ್ರಾರಂಭವಾದ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯು ಗಾಂಧಿ ವೃತ್ತಕ್ಕೆ ಬಂದು ಸೇರಿ ಅಲ್ಲಿಂದ ಸೈನಿಕ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಸಮ್ಮೇಳನ ವೇದಿಕೆಗೆ ಆಗಮಿಸಿತು.
ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಸಹಸ್ರಾರು ಕನ್ನಾಡಾಭಿಮಾನಿಗಳ ಜಯಘೋಷದೊಂದಿಗೆ ವೇದಿಕೆಯತ್ತ ಸಾಗಿದ ಮೆರವಣಿಗೆಯಲ್ಲಿ ವಿಶೇಷವಾಗಿ ಸಿದ್ದಪಡಿಸಲಾದ ರಥದ ಮೇಲೆ ಸಮ್ಮೇಳನದ ಸರ್ವಾಧ್ಯಕ್ಷ ಕೋ.ಚನ್ನಬಸಪ್ಪ ಅವರು ಆಸೀನರಾಗಿದ್ದರು. ವಿವಿಧ ಜಾನಪದಗಳ ಕಲಾತಂಡಗಳ ಜತೆಗೆ ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಪೊಲೀಸ್ ಅಶ್ವದಳ ಹಾಗೂ ಬೆಂಗಳೂರಿನಿಂದ ಆಗಮಿಸಿದ ಆರು ಪೊಲೀಸ್ ಬ್ಯಾಂಡ್‌ಗಳು ಮೆರವಣಿಗೆಗೆ ವಿಶೇಷ ಮೆರಗು ತರುವ ಜತೆಗೆ ಪ್ರಮುಖ ಆಕರ್ಷಣೆಯಾಗಿದ್ದವು.
ಸಮ್ಮೇಳನ ಉದ್ವಾಟಿಸಿ ಮಾತನಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು `ನೆಲ, ಜಲ ರಕ್ಷಣೆಗೆ ಬದ್ಧ, ಕನ್ನಡ ಮಾಧ್ಯಮ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ' ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು `ಕನ್ನಡ ಮತ್ತು ಕನ್ನಡಿಗರಿಗೆ ಆತಂಕದ ಸವಾಲು ಇದೀಗ ಎದುರಾಗಿದೆ. ಕನ್ನಡ ಶಾಲೆ ಮುಚ್ಚಿ ಎಲ್ಲೇಡೆ ಇಂಗ್ಲಿಷ್ ಶಾಲೆಗಳು ತಲೆ ಎತ್ತುತಿವೆ. ಇಂಗ್ಲಿಷ್ ಎಂಬುದು ಅನ್ನದ ಭಾಷೆ ಎಂದು ಹೇಳುತ್ತ ಎಲ್ಲೆಡೆ ಇಂಗ್ಲಿಷ್ ಕಾನ್ವೆಂಟ್‌ಗಳನ್ನು ಹುಟ್ಟುಹಾಕಲಾಗುತ್ತಿದೆ. ಈ ಕುರಿತು ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಹಾಗೂ ಸಿಇಟಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು' ಎಂದು ಆಗ್ರಹಿಸಿದರು.
`ಕಾವೇರಿ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಿಟ್ಟು ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದೇ ಹೋದರೆ ನಾವು ಒಕ್ಕೂಟ ವ್ಯವಸ್ಥೆಯಿಂದ ಹೊರಗೆ ಬರುವುದು ಅನಿವಾರ್ಯವಾಗುತ್ತದೆ' ಎಂದು ಹಾಲಂಬಿ ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಸಮ್ಮೇಳನದ ಸರ್ವಾಧ್ಯಕ್ಷ ಕೋ.ಚನ್ನಬಸಪ್ಪ ಅವರು ತಮ್ಮ ಭಾಷಣದುದ್ದಕ್ಕೂ ವಿದೇಶಿ ಕಂಪೆನಿಗಳಿಗೆ ಭೂಮಿ ನೀಡುವ ಸರ್ಕಾರ ಕ್ರಮಕ್ಕೆ ವಿರೋಧಿಸುತ್ತ, ನೈತಿಕ ಅಧಃಪತನ ಕುರಿತು ಕಳವಳ ವ್ಯಕ್ತಪಡಿಸುತ್ತ, ಜಾತೀಯತೆ, ಭ್ರಷ್ಟಾಚಾರ ಕುರಿತು ಎಚ್ಚರಿಕೆ ನೀಡುತ್ತ, ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ, ನೆರೆರಾಜ್ಯಗಳೊಂದಿಗೆ ಸೌಹಾರ್ದತೆಗೆ ಕರೆನೀಡಿ, ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಹೇಳಿದರು.
`ಸಾಹಿತ್ಯ ಸದನವೆಂಬ ಕಾರ್ಖಾನೆಯಲ್ಲಿ ಸುಖ, ಶಾಂತಿ, ಪ್ರೀತಿ, ಸಕಲ ಜೀವಾತ್ಮರಿಗೆ ಲೇಸನ್ನು ಎಸಗುವ ಸಂಜೀವಿನಿ ಔಷಧ ಕೊಡುವ ಧನ್ವಂತರಿಗಳಾಗಿ ಲೋಕ ಕಲ್ಯಾಣ ಕರ್ತೃಗಳಾಗಿ. ಅದನ್ನು ಮರೆತು ದ್ವೇಷ, ಪರಮತ ದೂಷಣೆ, ಯುದ್ಧಾಸ್ತ್ರಗಳ ಸುಳ್ಳಿನ ಆಯುಧಗಳನ್ನು ತಯಾರಿಸುವ, ಆಳುವವರ ಊಳಿಗದ ಆಳುಗಳಾಗಬೇಡಿ' ಎಂದು ಸಾಹಿತಿಗಳಿಗೆ ಕಿವಿಮಾತು ಹೇಳಿದರು.
`ಟಿಪ್ಪು ಹಿಂದೂ ಮತ ದ್ವೇಷಿ ಎಂಬುದು ಅಪ್ಪಟ ಸುಳ್ಳಿನ ಮುದ್ದೆ. ಏಕೆಂದರೆ ಮರಾಠಿಗರಿಂದ ಭಗ್ನವಾದ ಶೃಂಗೇರಿ ಶಾರದಮ್ಮನ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದವರು ಹೈದರ್ ಮತ್ತು ಟಿಪ್ಪು ಸುಲ್ತಾನ್. ಶೃಂಗೇರಿ ಜಗದ್ಗುರುಗಳಿಗೆ ಕನ್ನಡದಲ್ಲಿ ಪತ್ರಗಳನ್ನು ಬರೆದು ಅಮ್ಮನ ಮೆರವಣಿಗೆಗೆ ಪಲ್ಲಕ್ಕಿ ಕಾಣಿಕೆ ಕೊಟ್ಟವನು ಟಿಪ್ಪು. ಇಂತವನು ಹಿಂದೂ ದ್ವೇಷಿಯೆ?' ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.