ADVERTISEMENT

ಅಡುಗೆಯವರ ನೇಮಕಕ್ಕೆ ಹೈಕೋರ್ಟ್ ಅಸ್ತು

ವಿಭಾಗೀಯ ನ್ಯಾಯಪೀಠದ ಮಧ್ಯಂತರ ಆದೇಶ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಅಡುಗೆಯವರ ನೇಮಕಕ್ಕೆ ಹೈಕೋರ್ಟ್ ಅಸ್ತು
ಅಡುಗೆಯವರ ನೇಮಕಕ್ಕೆ ಹೈಕೋರ್ಟ್ ಅಸ್ತು   

ಬೆಂಗಳೂರು: ರಾಜ್ಯದಾದ್ಯಂತ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ 4,017 ಮಂದಿ ಅಡುಗೆಯವರು ಮತ್ತು ಅಡುಗೆ ಸಹಾಯಕರ ನೇಮಕಾತಿಗೆ ಹೈಕೋರ್ಟ್‌ ಅಸ್ತು ಎಂದಿದೆ.

ನೇಮಕಾತಿ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಅಮಾನತಿನಲ್ಲಿ ಇರಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಈ ಕುರಿತಂತೆ ಮಧ್ಯಂತರ ಆದೇಶ ನೀಡಿದೆ.

‘ನೇಮಕಾತಿಯು ಈ ಮೇಲ್ಮನವಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ನೇಮಕಾತಿ ಆದೇಶ ನೀಡುವಾಗ ಇದನ್ನು ಸ್ಪಷ್ಟವಾಗಿ ನಮೂದು ಮಾಡಬೇಕು’ ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಎಸ್.ಪೊನ್ನಣ್ಣ ವಾದ ಮಂಡಿಸಿ, ‘ಅರ್ಜಿದಾರರು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರು. ಇವರನ್ನು ರಕ್ಷಣೆ ಮಾಡುವ ಅಗತ್ಯವಿದೆ. ಅಷ್ಟಕ್ಕೂ ಈಗಾಗಲೇ ನೇಮಕಾತಿ ಪ್ರಕ್ರಿಯೆ ಬಹಳಷ್ಟು ಮುಂದುವರಿದ್ದು ಅಂತಿಮ ಹಂತದಲ್ಲಿರುವಾಗ ಇವರನ್ನು ಕೈಬಿಡುವುದು ಅನ್ಯಾಯವಾಗುತ್ತದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಮನ್ನಿಸಿದ ನ್ಯಾಯಪೀಠ ಮಧ್ಯಂತರ ಆದೇಶ ಹೊರಡಿಸಿ ನೇಮಕಾತಿಗೆ ಅಸ್ತು ಎಂದಿದೆ.

ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ವಿದ್ಯಾರ್ಥಿ ನಿಲಯಗಳಿಗೆ 4,017 ಮಂದಿ ಅಡುಗೆಯವರು ಮತ್ತು ಅಡುಗೆ ಸಹಾಯಕರ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ  ರತ್ನಮ್ಮ ಸೇರಿದಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಒಟ್ಟು 58 ಜನರು ಹೈಕೋರ್ಟ್ ಮೆಟ್ಟಿಲೇರಿದ್ದರು.

’ಡಿ’ ದರ್ಜೆಯ ನೌಕರರ ನೇಮಕಕ್ಕೆ ವಿದ್ಯಾರ್ಹತೆ ಏಳನೇ ತರಗತಿ. ಆದರೂ, ಅಡುಗೆ ಸಹಾಯಕರಿಗೆ 10ನೇ ತರಗತಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ’ ಎಂದು ಇವರು ಆಕ್ಷೇಪಿಸಿದ್ದರು. ಈ ಅರ್ಜಿಯನ್ನು ಮನ್ನಿಸಿದ ನ್ಯಾಯಪೀಠವು 2018ರ ಜನವರಿ 4ರಂದು ನೇಮಕಾತಿ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.