ADVERTISEMENT

ಅಡ್ಡಪಲ್ಲಕ್ಕಿಗೆ ಚಂಪಾ, ಘಂಟಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2013, 19:30 IST
Last Updated 10 ಅಕ್ಟೋಬರ್ 2013, 19:30 IST

ಮೈಸೂರು: ನಗರದ ಸರಸ್ವತಿಪುರಂನಲ್ಲಿ ಗುರುವಾರ ನಡೆದ ದಸರಾ ಕವಿ ಸಮ್ಮೇಳನವು ಅಡ್ಡಪಲ್ಲಕ್ಕಿಯನ್ನು ವಿರೋಧಿಸುವುದಕ್ಕೂ ಸಾಕ್ಷಿಯಾಯಿತು.

ಕವಿ ಸಮ್ಮೇಳನವನ್ನು ಉದ್ಘಾಟಿಸಿದ ಚಂದ್ರಶೇಖರ ಪಾಟೀಲ (ಚಂಪಾ) ಅವರು, ಧಾರ್ಮಿಕ ವಲಯದ ಮಹಾನುಭಾವರು ರಾಜರಲ್ಲ. ಆದರೂ, ರಾಜಗುರುವಾಗಿದ್ದೇವೆ ಎಂಬ ಕನವರಿಕೆಯಲ್ಲಿ ರಾಜರ ಹಾಗೆ ಮೇಕಪ್‌ ಮಾಡಿಕೊಂಡು, ಜನರ ಮೇಲೆ ಕುಳಿತುಕೊಂಡು ಅಡ್ಡಪಲ್ಲಕ್ಕಿಯಲ್ಲಿ ತೆರಳುತ್ತಾರೆ. ಹೀಗೆ ಧಾರ್ಮಿಕ ವಲಯದ ಪಟ್ಟಭದ್ರ ಹಿತಾಸಕ್ತಿಗಳು ವಿಜೃಂಭಿಸುತ್ತಿವೆ ಎಂದು ಟೀಕಿಸಿದರು.

ಮಹಿಳಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಮಲ್ಲಿಕಾ ಘಂಟಿ, ಅಡ್ಡಪಲ್ಲಕ್ಕಿಯನ್ನು ಬಸವಣ್ಣ ಕೂಡಾ ವಿರೋಧಿಸಿ, ದೇಹವೇ ದೇಗುಲ ಎಂದಿದ್ದ. ಅನಿವಾರ್ಯವಾಗಿ ಶವ, ರೋಗಿಯನ್ನು ಹೊತ್ತೊ­ಯ್ಯುತ್ತಾರೆ. ಆದರೆ, ಆರೋಗ್ಯವಾಗಿರುವವರು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸುವ ಮೂಲಕ ಜನರ ಮೇಲೆ ಕುಳಿತುಕೊಳ್ಳುವುದಕ್ಕೆ ವಿರೋಧವಿದೆ ಎಂದರು.

ಸಮೃದ್ಧ, ವೈವಿಧ್ಯ: ‘ಸದ್ಯದ ಸಾಹಿತ್ಯ ಸಮೃದ್ಧ ಹಾಗೂ ವೈವಿಧ್ಯ’ ಎಂದು ಚಂಪಾ ಅಭಿಪ್ರಾಯಪಟ್ಟರು.

‘ವಿಭಿನ್ನ ಸಾಮಾಜಿಕ ಸ್ತರದಿಂದ, ಅಲ್ಪಸಂಖ್ಯಾತರ ವಲಯದಿಂದ, ಮಾತನಾಡದ ವಲಯದಿಂದ ಸಮರ್ಥ ಧ್ವನಿಗಳು ಬರುತ್ತಿವೆ. ಬೇಂದ್ರೆ ಹೇಳುವ ಹಾಗೆ ‘ಒಂದರೊಳಗೊಂದಿಲ್ಲ, ಒಂದೊರೊಳಗೆ ಕುಂದಿಲ್ಲ’ ಎನ್ನುವ ಹಾಗೆ ಬರೆಯುತ್ತಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ಏಕತಾನತೆಯಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ತಲ್ಲಣಗಳ ನಡುವೆ ಕವಿಗಳು ಬರೆಯುವ ಮೂಲಕ ಸ್ಪಂದಿಸಬೇಕು. ಗಮನಿಸಿ; ಗಣರಾಜ್ಯೋತ್ಸವ ದಿನ ಗಣ್ಯರು ಬುಲೆಟ್‌  ಪ್ರೂಫ್ ರಕ್ಷಣೆಯಲ್ಲಿ  ಭಾಷಣ ಮಾಡುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಅವರು ಬರುತ್ತಾರೆಂಬ ಕಾರಣಕ್ಕೆ ಪೊಲೀಸ್‌ ಶ್ವಾನವೊಂದು ಎಲ್ಲರನ್ನೂ, ಎಲ್ಲವನ್ನೂ ಮೂಸಿಕೊಂಡು ಹೋಯಿತು. ಇಲ್ಲಿ ಭಯೋತ್ಪಾದಕರಿಲ್ಲ ಎನ್ನುವ ಸಂದೇಶ ಸಚಿವರಿಗೆ ಹೋಗಿರಬೇಕು’ ಎಂದು ವ್ಯಂಗ್ಯವಾಡಿದರು.

‘ಸಾಮಾಜಿಕ ಬದುಕಿನ ಕೆನೆ ಕವಿಗಳು. ಇದಕ್ಕಾಗಿ ಚಾರಿತ್ರಿಕ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬುದ್ಧಿಜೀವಿಗಳ ಪಾತ್ರ ಏನು ಎನ್ನುವ ಕುರಿತು ವಾಹಿನಿಗಳಲ್ಲಿ, ವಾಚಕರ ವಾಣಿಯಲ್ಲಿ ಚರ್ಚೆ ನಡೆಯುತ್ತಿದೆ. ಯಾವುದೇ ಮಹತ್ತರ ವಿಷಯ ಕುರಿತು ನಮ್ಮ ನಾಡಿನಲ್ಲಿಯೇ ಹೆಚು್ಚ ಚರ್ಚೆಯಾಗುತಿ್ತದೆ. ಹೀಗೆ ಕವಿಗಳ, ಚಿಂತಕರ ಸಂಖ್ಯೆ ಹೆಚ್ಚಬೇಕು’ ಎಂದು ಕರೆ ನೀಡಿದರು.

‘ಜೀವಪರವಾದ ಕನ್ನಡ ಕಾವ್ಯ ಸದಾ ಜನರ ನಾಡಿಯ ಮಿಡಿತವಾಗಲಿ’ ಎಂದು ಆಶಿಸಿದರು. ನಂತರ ‘ಯುದ್ಧ ಮತ್ತು ಬುದ್ಧ’ ಹಾಗೂ ‘ವಿಚಾರಿಸಿಕೊಳ್ಳುತ್ತಾರೆ ಒಂದು ದಿನ’ ಎನ್ನುವ ಕವನಗಳನ್ನು ವಾಚಿಸಿದರು.

ಮುಖ್ಯ ಅತಿಥಿಯಾದ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್‌, ಕವಿಗಳಿಗೆ ಕಾವ್ಯ ಮೀಮಾಂಸೆ ಬೇಕು. ಇದು ಜೀವ ಮೀಮಾಂಸೆಯಿಂದ ಬರುತ್ತದೆ ಎಂದರು. ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.