ADVERTISEMENT

ಅಡ್ವಾಣಿಯೂ ಕೈಬಿಟ್ಟರೇ?

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ಬೆಂಗಳೂರು: `ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ನಿಮ್ಮ ರಕ್ಷಣೆಗೆ ಬರಬಹುದು ಎಂದು ಭಾವಿಸಿದ್ದೆ. ಅವರು ಕೂಡ ನಿಮ್ಮನ್ನು ಕೈಬಿಟ್ಟರಾ?~

ಇದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಬುಧವಾರ ತಮ್ಮನ್ನು ಭೇಟಿಯಾದ ಡಿ.ವಿ.ಸದಾನಂದ ಗೌಡ ಅವರ ಮುಂದೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಇಟ್ಟ ಪ್ರಶ್ನೆ.

ಗೌಡರು ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಇಬ್ಬರೇ ಕೆಲಕಾಲ ಚರ್ಚೆ ನಡೆಸಿದರು. `ಬಿಜೆಪಿ ಹೈಕಮಾಂಡ್ ಕುರಿತು ನಾನು ಏನನ್ನೂ ಹೇಳುವುದಿಲ್ಲ. ಅಡ್ವಾಣಿ ಅವರ ಹೇಳಿಕೆಗಳನ್ನು ತಿಳಿದಿದ್ದ ನಾನು, ಅವರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಅಂದುಕೊಂಡಿದ್ದೆ. ಆದರೆ, ಆ ರೀತಿ ಆಗಿಲ್ಲ. ಅವರು ಕೂಡ ಒತ್ತಡಕ್ಕೆ ಮಣಿದಿರಬಹುದು~ ಎಂಬುದಾಗಿ ರಾಜ್ಯಪಾಲರು ಸದಾನಂದ ಗೌಡರಿಗೆ ತಿಳಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

`ನಿಮಗೆ ದೊರೆತ 11 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೀರಿ. ಪಾರದರ್ಶಕ ಆಡಳಿತ ನೀಡುವುದಕ್ಕೂ ಕ್ರಮ ಕೈಗೊಂಡಿದ್ದೀರಿ. ಜನರು ಮೆಚ್ಚುವಂತೆ ಆಡಳಿತ ನಿರ್ವಹಿಸಿದ್ದೀರಿ ಎಂಬ ಭಾವನೆ ಎಲ್ಲರಲ್ಲೂ ಇದೆ. ಈಗ ಮುಖ್ಯಮಂತ್ರಿ ಹುದ್ದೆ ತ್ಯಜಿಸುವ ಸಂದರ್ಭ ಬಂದಿರುವುದರಿಂದ ಧೃತಿಗೆಡಬೇಡಿ. ನಿಮಗೆ ಒಳ್ಳೆಯ ರಾಜಕೀಯ ಭವಿಷ್ಯವಿದೆ. ಧೈರ್ಯದಿಂದ ಮುನ್ನಡೆಯಿರಿ~ ಎಂದು ಸಮಾಧಾನ ಹೇಳಿದರು ಎಂದು ಗೊತ್ತಾಗಿದೆ.

`ಹಿಂದೆ ಆಡಳಿತ ಒಂದೇ ಕಡೆ ವಾಲುತ್ತಿತ್ತು. ಆದರೆ, ನೀವು ಅಧಿಕಾರಕ್ಕೆ ಬಂದ ಬಳಿಕ ಆಡಳಿತವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದೀರಿ. ಸಾಮಾಜಿಕ ನ್ಯಾಯ ಪಾಲನೆಯ ಪ್ರಯತ್ನವೂ ನಿಮ್ಮಿಂದ ಆಗಿದೆ. ನೀವು ರಾಜೀನಾಮೆ ಸಲ್ಲಿಸುವ ಪರಿಸ್ಥಿತಿ ಒದಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ನಿಮ್ಮ ರಾಜೀನಾಮೆ ಸ್ವೀಕರಿಸುತ್ತಿದ್ದೇನೆ ಕ್ಷಮಿಸಿ~ ಎಂಬುದಾಗಿ ಭಾರದ್ವಾಜ್ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.