ADVERTISEMENT

ಅತೃಪ್ತ ಶಾಸಕರ ಮನವೊಲಿಸಲಿದ್ದೇವೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST

ಬಾಗಲಕೋಟೆ: ‘ಸಚಿವ ಸ್ಥಾನ ಸಿಗದ ಕಾರಣ ಕೆಲವರಿಗೆ ಅಸಮಾಧಾನ ಇರೋದು ನಿಜ. ಆದರೆ ಎಲ್ಲರ ಮನವೊಲಿಸಲಿದ್ದೇವೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಬಾದಾಮಿ ಶಾಸಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಬಾದಾಮಿ ತಾಲ್ಲೂಕು ಹಿರೇಮುಚ್ಚಳಗುಡ್ಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನ ಕೈ ತಪ್ಪಿದ ನಂತರ ಎಂ.ಬಿ.ಪಾಟೀಲ ನನ್ನ ಭೇಟಿಯಾಗಿದ್ದು ನಿಜ. ಮಾಧ್ಯಮಗಳಲ್ಲಿ ವರದಿಯಾದಂತೆ ಕಣ್ಣೀರು ಹಾಕಿಲ್ಲ. ಅವರನ್ನು ಸಮಾಧಾನ ಮಾಡಿದ್ದೇನೆ’ ಎಂದರು.

‘ಮಂತ್ರಿ ಆಗಬೇಕು ಅಂದುಕೊಂಡಿದ್ದವರಿಗೆ ಅಸಮಾಧಾನ ಆಗೋದು ಸಹಜ. ಹಾಗೆಂದು ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ’ ಎಂದು ಹೇಳಿದ ಸಿದ್ದರಾಮಯ್ಯ, ‘ರಾಜಕೀಯದಲ್ಲಿ ನಮಗೆ ಬಿಜೆಪಿಯೇ ಮೊದಲ ವೈರಿ. ಆ ಪಕ್ಷದವರು ಮೊದಲು ತಮ್ಮೊಳಗಿನ ಆಂತರಿಕ ಕಲಹ, ಅಸಮಾಧಾನ ಸರಿಪಡಿಸಿಕೊಳ್ಳಲಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ತಮ್ಮ ವಿರುದ್ಧ ಮಾಡಿರುವ ಆರೋಪ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಪಾಟೀಲ ಅವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ ಅವರು ನಿರಾಕರಿಸಿದರು.
*
‘ಅಳೋದು–ಕರೆಯೋದು ಮಾಡೊಲ್ಲ’ 
ಬಾದಾಮಿ ಕ್ಷೇತ್ರದಲ್ಲಿ ಎರಡನೇ ದಿನದ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರನ್ನು ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಭೇಟಿ ಮಾಡಿದರು. ಇಲ್ಲಿನ ಹುಲಿಗೆಮ್ಮನ ಕೊಳ್ಳದಲ್ಲಿ ತಮ್ಮನ್ನು ಭೇಟಿಯಾದ ಎಸ್.ಆರ್.ಪಾಟೀಲ ಅವರ ಕೈ ಕುಲುಕಿದ ಸಿದ್ದರಾಮಯ್ಯ, ಕಾರಿನಲ್ಲೇ ಜೊತೆಯಲ್ಲಿ ಕೂರಿಸಿಕೊಂಡು ತೆರಳಿದರು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್.ಆರ್.ಪಾಟೀಲ, ‘ಸಚಿವ ಸ್ಥಾನ ಕೈ ತಪ್ಪಿದ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ. ವೈಯಕ್ತಿಕ ಕಾರಣದಿಂದ ಒಂದು ದಿನ ತಡವಾಗಿ ಬಂದು ಅವರನ್ನು ಭೇಟಿ ಮಾಡುತ್ತಿದ್ದೇನೆ. ಸಚಿವ ಸ್ಥಾನಕ್ಕಾಗಿ ಅತೃಪ್ತಿ, ಆಕ್ರೋಶ ವ್ಯಕ್ತಪಡಿಸೊಲ್ಲ. ಅಳೋದು–ಕರೆಯೋದು ಮಾಡೊಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.