ADVERTISEMENT

ಅನ್ನದಾತನಿಗೆ ಔತಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:55 IST
Last Updated 24 ಫೆಬ್ರುವರಿ 2011, 18:55 IST

ಬೆಂಗಳೂರು: ಚೊಚ್ಚಲ ಕೃಷಿ ಬಜೆಟ್ ಮಂಡಿಸಿದ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೃಷಿ ಮತ್ತು ನೀರಾವರಿಗೆ ಬಂಪರ್ ಕೊಡುಗೆ ನೀಡಿದ್ದು ಒಟ್ಟು 17,857 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.

ರೈತರಿಗೆ ಶೇ 1ರ ಬಡ್ಡಿ ದರದಲ್ಲಿ ಸಾಲ, ಅವರ ಮಕ್ಕಳ ಉನ್ನತ ಶಿಕ್ಷಣಕ್ಕೆ ಬಡ್ಡಿ ರಹಿತ ಸಾಲ ಸೇರಿದಂತೆ ಇತರ ಕೆಲ ರೈತ ಪರ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಆದರೆ, ರೈತರನ್ನು ಒಂದು ಕಡೆ ಸಂತುಷ್ಟಗೊಳಿಸಿ ಮತ್ತೊಂದು ಕಡೆ ಸಮಾಜದ ಇತರ ವರ್ಗಗಳ ಮೇಲೆ ತೆರಿಗೆಯ ‘ಭಾರ’ವನ್ನೂ ಹೊರಿಸಿದ್ದಾರೆ.

ಶೇ 13.5ರಷ್ಟು ಇದ್ದ ಮೌಲ್ಯವರ್ಧಿತ ತೆರಿಗೆ ದರವನ್ನು ಶೇ 14ಕ್ಕೆ ಹೆಚ್ಚಿಸಿ, ಬಹುತೇಕ ಎಲ್ಲ ವಸ್ತುಗಳು ತುಟ್ಟಿಯಾಗುವಂತೆ ಮಾಡಿದ್ದಾರೆ. ಚಿನ್ನ ಮತ್ತಿತರ ಬೆಲೆ ಬಾಳುವ ಲೋಹಗಳ ಆಭರಣಗಳು ಮತ್ತು ಹರಳುಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಹೆಚ್ಚಿಸಿದ್ದು, ಇವು ಕೂಡ ಇನ್ನು ಮುಂದೆ ದುಬಾರಿಯಾಗಲಿವೆ.

ಅಬಕಾರಿ ಸುಂಕದ ದರಗಳನ್ನು ಶೇ 10ರಿಂದ 20ರವರೆಗೆ ವಿವಿಧ 17 ಸ್ಲ್ಯಾಬ್‌ಗಳ ಮೇಲೆ ಹೆಚ್ಚಿಸಿರುವುದರಿಂದ ಮದ್ಯ ಮತ್ತಷ್ಟು ತುಟ್ಟಿಯಾಗಲಿದೆ.  ಶೇ 10ರಷ್ಟಿರುವ ವಾಹನಗಳ ಮೇಲಿನ ಸೆಸ್ ಅನ್ನು ಶೇ11ಕ್ಕೆ ಏರಿಸಿರುವುದರಿಂದ ಕಾರು ಬೈಕು ಸೇರಿದಂತೆ ಎಲ್ಲಾ ವಾಹನಗಳ ಬೆಲೆ ಹೆಚ್ಚಾಗಲಿದೆ.

ಇವು ಗುರುವಾರ ಯಡಿಯೂರಪ್ಪ ಮಂಡಿಸಿದ 2011-12ನೇ ಸಾಲಿನ ಬಜೆಟ್ ಮುಖ್ಯಾಂಶಗಳು. ಈ ಸಲದ ಬಜೆಟ್ ಗಾತ್ರವನ್ನು 85,319 ಕೋಟಿ ರೂಪಾಯಿಗೆ ಏರಿಸಿದ್ದು, ರೂ 12,482 ಕೋಟಿ ವಿತ್ತೀಯ ಕೊರತೆ ತೋರಿಸಲಾಗಿದೆ. ಬಜೆಟ್‌ನ ವೆಚ್ಚ ನಿರ್ವಹಿಸಲು ಜುಲೈ 31ರವರೆಗೆ ಅಂದರೆ ನಾಲ್ಕು ತಿಂಗಳ ಲೇಖಾನುದಾನ ಕೋರಲಾಗಿದೆ.

ಈ ಸಲದ ಬಜೆಟ್ ಅನ್ನು ಕೃಷಿ (ಭಾಗ-1) ಮತ್ತು ಸಾಮಾನ್ಯ ಬಜೆಟ್ (ಭಾಗ-2) ಎಂದು ಪ್ರತ್ಯೇಕ ಪುಸ್ತಕಗಳಲ್ಲಿ ಮುದ್ರಣ ಮಾಡಿದ್ದು, ಅದನ್ನು ಮುಖ್ಯಮಂತ್ರಿ ಯಡಿಯೂರಪ್ಪ 2.55 ಗಂಟೆ ಕಾಲ ಓದಿದರು. ಕೃಷಿ ಬಜೆಟ್ 40 ಪುಟಗಳಲ್ಲಿ ಇದ್ದರೆ, ಸಾಮಾನ್ಯ ಬಜೆಟ್ 87 ಪುಟಗಳನ್ನು ಹೊಂದಿದೆ.

ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರತಿಪಕ್ಷಗಳ ಕಡೆಗೂ ಟೀಕಾಸ್ತ್ರ ಬಿಟ್ಟರು. ರಾಜ್ಯದ ಹಣಕಾಸು ಪರಿಸ್ಥಿತಿ ಸದೃಢವಾಗಿದ್ದು, ಈ ಬಗ್ಗೆ ಅನುಮಾನ ಬೇಡ ಎಂದು ತಿರುಗೇಟು ನೀಡಿದರು. ಸಾರ್ವಜನಿಕ ಋಣದ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾ, ತೆರಿಗೆ ಸಂಗ್ರಹಣೆಯನ್ನು ಉತ್ತಮಪಡಿಸಲು ಮತ್ತು ಅಭಿವೃದ್ಧಿ ವೆಚ್ಚಗಳನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದೂ ಹೇಳಿದರು.
ಶಾಸಕರು ಸಂಶಯಪಡುವುದು ಬೇಡ ಎನ್ನುವ ಕಾರಣಕ್ಕೆ ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖೆಯ ವೆಬ್‌ಸೈಟ್‌ನಲ್ಲಿ ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಪ್ರಕಟಿಸುವುದಾಗಿಯೂ ಅವರು ಘೋಷಿಸಿದರು.

ಸುವರ್ಣ ಭೂಮಿ: ಹತ್ತು ಲಕ್ಷ ರೈತ ಕುಟುಂಬಗಳ ಅಭಿವೃದ್ಧಿಗೆ ‘ಸುವರ್ಣ ಭೂಮಿ ಯೋಜನೆ’ ಅನುಷ್ಠಾನ ಮಾಡುವುದಾಗಿ ಹೇಳಿ, ಈ ಸಲುವಾಗಿ 1000 ಕೋಟಿ ರೂಪಾಯಿ ನೀಡುವುದಾಗಿ ಪ್ರಕಟಿಸಿದರು.

ನೀರಾವರಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು 3900 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಒಂದು ಲಕ್ಷ ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೂ 100 ಕೋಟಿ ರೂಪಾಯಿ ನೀಡುವುದಾಗಿ ಹೇಳಿದರು.

ರಾಜ್ಯದ ಹಲವು ಕಡೆ ನಡೆಸಿದ ಸಾವಯವ ಸಂವಾದಗಳಿಂದ ಪುಳಕಿತರಾದಂತೆ ಕಾಣುವ ಮುಖ್ಯಮಂತ್ರಿಯವರು ಈ ಸಲದ ಬಜೆಟ್‌ನಲ್ಲಿ ಸಾವಯವ ಕೃಷಿಗೆ 200 ಕೋಟಿ ರೂಪಾಯಿ ತೆಗೆದಿರಿಸಿದ್ದಾರೆ. ಕಳೆದ ವರ್ಷ ಇದಕ್ಕೆ ರೂ 100 ಕೋಟಿ ಮೀಸಲಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.