ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಮಾಂಗೂರ ಕ್ರಾಸ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಲ್ಲಿನ ಸಮಾಧಿ ಮಠದ ವಿರೂಪಾಕ್ಷ ಲಿಂಗ (ಸಂಗಮನಾಥ) ಸ್ವಾಮೀಜಿ (52) ನಿಧನರಾದರು.
ಕೊಲ್ಹಾಪುರದಿಂದ ನಿಪ್ಪಾಣಿಗೆ ಸ್ವಾಮೀಜಿ ಅವರು ಕಾರಿನಲ್ಲಿ ಹಿಂತಿರುಗುವಾಗ ಅದಕ್ಕೆ ಹಿಂದಿನಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆಯಿತು. ಆಯ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಯ ಮೇಲೆ ಉರುಳಿ ಬಿತ್ತು. ಎದುರು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ಲಾರಿ ಕೂಡ ಕಾರಿಗೆ ಡಿಕ್ಕಿ ಹೊಡೆಯಿತು.
ಸ್ವಾಮೀಜಿಯವರೇ ಕಾರನ್ನು ಚಾಲನೆ ಮಾಡುತ್ತಿದ್ದರು. ಸ್ಥಳದಲ್ಲೇ ಅವರು ಸಾವನ್ನಪ್ಪಿದರು.
ಇಂಡೊ ಫ್ರೆಂಚ್ ಕಲ್ಚರಲ್ ಸೊಸೈಟಿ ವತಿಯಿಂದ ಫ್ರಾನ್ಸ್‌ನಲ್ಲಿ ನಡೆದ ಹತ್ತು ದಿನಗಳ ವಿಶೇಷ ಶಿಬಿರ ಮುಗಿಸಿಕೊಂಡು ಬಂದ ಸ್ವಾಮೀಜಿ, ಮುಂಬೈಯಿಂದ ಕೊಲ್ಹಾಪುರಕ್ಕೆ ಬಂದು ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಅವರೊಂದಿಗೆ ಊಟ ಮುಗಿಸಿ ನಿಪ್ಪಾಣಿಗೆ ಬರುವಾಗ ಈ ಅಪಘಾತ ಸಂಭವಿಸಿದೆ.
ಸ್ವಾಮೀಜಿ ಅವರು 2 ವರ್ಷಗಳ ಹಿಂದೆ ಸಮಾಧಿ ಮಠದ ಪೀಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.