ADVERTISEMENT

ಅಪೌಷ್ಟಿಕ ಮಕ್ಕಳ ಮೊಟ್ಟೆ, ಹಾಲಿನ ಕಾಸಿಗೆ ಅಲೆದಾಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST
ಅಪೌಷ್ಟಿಕ ಮಕ್ಕಳ ಮೊಟ್ಟೆ, ಹಾಲಿನ ಕಾಸಿಗೆ ಅಲೆದಾಟ
ಅಪೌಷ್ಟಿಕ ಮಕ್ಕಳ ಮೊಟ್ಟೆ, ಹಾಲಿನ ಕಾಸಿಗೆ ಅಲೆದಾಟ   

ತುಮಕೂರು: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮೊಟ್ಟೆ, ಹಾಲು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಕಟಿಬಿದ್ದ ರಾಜ್ಯ ಸರ್ಕಾರವು ಈ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರ ಹೆಗಲಿಗೆ ಹಾಕಿ ಕೈತೊಳೆದುಕೊಂಡಿದೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಸಾಮಾನ್ಯ ಸ್ಥಿತಿಗೆ ತರಲು ಏಪ್ರಿಲ್‌ನಿಂದ ರಾಜ್ಯದಲ್ಲಿ ಗುರುತಿಸಲಾಗುವ ಎಸ್-ಗ್ರೇಡ್ (ಮಿತಿ ಮೀರಿದ ಅಪೌಷ್ಟಿಕತೆಯಿಂದ ಬಳಲುತ್ತಿರುವವರು) ಮಕ್ಕಳಿಗೆ ಹಾಲು ಮತ್ತು ಮೊಟ್ಟೆಯನ್ನು ಅಂಗನವಾಡಿ ಮೂಲಕ ನೀಡಲಾಗುತ್ತಿದೆ. ಆದರೆ, ಸರ್ಕಾರ ಹಾಲು-ಮೊಟ್ಟೆ ಕೊಂಡುಕೊಳ್ಳಲು ಹಣವನ್ನೇ ನೀಡಿಲ್ಲ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಅಂಗನವಾಡಿ ಕಾರ್ಯಕರ್ತೆಯರು ಹಣಕ್ಕಾಗಿ ಪರದಾಡುವಂತಾಗಿದೆ.

ಮೊಟ್ಟೆ ಮತ್ತು ಹಾಲನ್ನು ಅಂಗನವಾಡಿ ಕಾರ್ಯಕರ್ತೆಯರೆ ಕೊಂಡು ಮಕ್ಕಳಿಗೆ ನೀಡುವಂತೆ ಇಲಾಖೆ ಸೂಚಿಸಿತ್ತು. ತಿಂಗಳ ಕೊನೆಯಲ್ಲಿ ಇದಕ್ಕೆ ತಗಲುವ ಹಣ ನೀಡುವುದಾಗಿ ಭರವಸೆ ನೀಡಿತ್ತು. ಮೂರು ತಿಂಗಳು ಕಳೆದರೂ ಹಣವನ್ನೇ ನೀಡಿಲ್ಲ. ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಸಬೂಬು ಹೇಳುತ್ತಿದ್ದಾರೆ. ಕಡಿಮೆ ವೇತನದಲ್ಲಿ ಬದುಕುತ್ತಿರುವ ನಮ್ಮ ಹೊಟ್ಟೆಯ ಮೇಲೆ ಸರ್ಕಾರ ಬರೆ ಎಳೆಯಬಾರದು ಎಂದು ಪಾವಗಡದ ಅಂಗನವಾಡಿ ಕೇಂದ್ರವೊಂದರ ಮೇಲ್ವಿಚಾರಕಿ `ಪ್ರಜಾವಾಣಿ~ಯೊಂದಿಗೆ ನೋವು ತೋಡಿಕೊಂಡರು.

ADVERTISEMENT

ಪ್ರತಿ ತಾಲ್ಲೂಕಿನಲ್ಲಿ ಬೇರೆ ಬೇರೆ ಮಾನದಂಡ ಅನುಸರಿಸಲಾಗುತ್ತಿದೆ. ಕೆಲವೊಂದು ತಾಲ್ಲೂಕಿನಲ್ಲಿ ಎರಡು ದಿನ ಮೊಟ್ಟೆ, ನಾಲ್ಕು ದಿನ ಹಾಲು ಕೊಡಲು ಹೇಳಲಾಗಿದೆ. ಇನ್ನೂ ಕೆಲವು ತಾಲ್ಲೂಕುಗಳಲ್ಲಿ ವಾರದಲ್ಲಿ ಮೂರು ದಿನ ಮೊಟ್ಟೆ, ಮೂರು ದಿನ ಹಾಲು ಕೊಡಲಾಗುತ್ತಿದೆ.

ಪ್ರತಿ ತಿಂಗಳೂ ಪೂರ್ಣ ಪ್ರಮಾಣದಲ್ಲಿ ಸಂಬಳ ನೀಡುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ಪಾಲಿನ ವೇತನ ಬೇರೆ ಬೇರೆ ಕಂತಿನಲ್ಲಿ ಬರುತ್ತಿದೆ. ಇದರ ನಡುವೆ ಅಪೌಷ್ಟಿಕ ಮಕ್ಕಳ ಹಾಲು, ಮೊಟ್ಟೆಯ ಹೊರೆ ಕೂಡ ಹೊರಬೇಕೆಂದರೆ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಗುರುತಿಸಲಾಗುವ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪ್ರತಿ ತಿಂಗಳಲ್ಲಿ ನಾಲ್ಕು ಸಲ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಬೇಕು. ಮಕ್ಕಳನ್ನು ಕರೆದುಕೊಂಡು ಹೋಗುವ ಬಸ್ ಪ್ರಯಾಣ ದರ ಕೂಡ ಸರ್ಕಾರ ನೀಡುತ್ತಿಲ್ಲ. ಅಪೌಷ್ಟಿಕ ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಬೇಕಾಗಿದ್ದ ಸರ್ಕಾರ, ಬಡ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೊಣೆ ಹೊರೆಸಿ ಕೈತೊಳೆದುಕೊಂಡಿದೆ ಎಂದು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ (ಸಿಐಟಿಯು) ಜಿಲ್ಲಾ ಘಟಕದ ಅಧ್ಯಕ್ಷೆ ಕಮಲಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಒಂದು ಸಲ ತಾಲ್ಲೂಕು ಆಸ್ಪತ್ರೆಗೆ ಹೋಗಬೇಕಾದರೆ ಅಂಗನವಾಡಿ ಕಾರ್ಯಕರ್ತೆಯರುರೂ  50ರಿಂದ 60 ರೂಪಾಯಿ ಬಸ್‌ಗೆ ತೆರಬೇಕು. ತಿಂಗಳಿಗೆ ನಾಲ್ಕು ಸಲ ಪ್ರಯಾಣಿಸಿದರೆ ರೂ 200 ಆಗುತ್ತದೆ. ಕಾರ್ಯಕರ್ತೆಯರು ಎಲ್ಲಿಂದ ಹಣ ತರಬೇಕು ಎನ್ನುತ್ತಾರೆ.

ಈ ಹಿಂದೆ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ನೀಡುತ್ತಿದ್ದಾಗ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಹೊಸ ಮಾದರಿ ಸಿದ್ಧಪಡಿಸಿದ ಆಹಾರ ಕ್ರಮದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಅಪೌಷ್ಟಿಕತೆಗೆ ಗುರಿಯಾಗುತ್ತಿದ್ದಾರೆ. ಅಲ್ಲದೆ ಕೆಲಸದ ಅಭದ್ರತೆ, ಉದ್ಯೋಗ ಖಾತರಿಯ ವಿಫಲತೆ, ಕಳಪೆ ಗುಣಮಟ್ಟದ ಆಹಾರ ಪೂರೈಕೆ ಕೂಡ ಮಕ್ಕಳ ಅಪೌಷ್ಟಿಕತೆಯ ಹಿಂದಿನ ಕಾರಣಗಳಲ್ಲಿ ಒಂದಾಗಿವೆ. ಗಾಯದ ಮೂಲಕ್ಕೆ ಚಿಕಿತ್ಸೆ ನೀಡಬೇಕಾದ ಸರ್ಕಾರ, ಅಂಗನವಾಡಿ ಕಾರ್ಯಕರ್ತೆಯರ ಹೆಗಲಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ ಎಂದು ದೂರಿದರು.

ಬಿಡುಗಡೆಯಾಗದ ಹಣ

ಮಾರುಕಟ್ಟೆಯಲ್ಲಿ ಮೊಟ್ಟೆಗೆ ರೂ 4 ಬೆಲೆ ಇದೆ.  ಸರ್ಕಾರ ಮೊಟ್ಟೆಯೊಂದಕ್ಕೆ ರೂ 3.50 ಕೊಡುವುದಾಗಿ ಆದೇಶದಲ್ಲಿ ತಿಳಿಸಿದೆ. ಈ ತಿಂಗಳು ಮತ್ತೊಂದು ಆದೇಶ ಹೊರಡಿಸಿ ಮೊಟ್ಟೆಯೊಂದಕ್ಕೆ ರೂ 3.25 ನೀಡುವುದಾಗಿ ಹೇಳಿದೆ. ಇಷ್ಟಾಗಿಯೂ ಮೂರು ತಿಂಗಳ ಮೊಟ್ಟೆ ಹಣವನ್ನು ಬಿಡುಗಡೆ ಮಾಡಿಲ್ಲ. 200 ಗ್ರಾಂ ಹಾಲಿಗೆ ಮಾರುಕಟ್ಟೆಯಲ್ಲಿ ರೂ 6 ಕೊಡಬೇಕಾಗಿದೆ. ಈ ಹಣ ಕೂಡ ಬಂದಿಲ್ಲ ಎಂದು ಗುಬ್ಬಿ ಪಟ್ಟಣದ ಅಂಗನವಾಡಿ ಕೇಂದ್ರವೊಂದರ ಮೇಲ್ವಿಚಾರಕಿ ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.