ADVERTISEMENT

ಅಪ್ಪನ ತಬ್ಬಿ ಅತ್ತ ಮಗಳು

ಸನ್ನಡತೆಯ ಆಧಾರದ ಮೇಲೆ 8 ಜನರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 19:53 IST
Last Updated 15 ಆಗಸ್ಟ್ 2016, 19:53 IST
ಧಾರವಾಡದ ಕೇಂದ್ರ ಕಾರಾಗೃಹದಿಂದ ಸೋಮವಾರ ಬಿಡುಗಡೆಯಾದ ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕಿನ ದೊಡ್ಡಗುಬ್ಬಿಯ ರಾಮಪ್ಪ ಹಂಸಭಾವಿ ಅವರನ್ನು ಮಗಳು ಅಕ್ಷತಾ ಬಿಗಿದಪ್ಪಿ ಅತ್ತ ಭಾವುಕ ಕ್ಷಣ
ಧಾರವಾಡದ ಕೇಂದ್ರ ಕಾರಾಗೃಹದಿಂದ ಸೋಮವಾರ ಬಿಡುಗಡೆಯಾದ ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕಿನ ದೊಡ್ಡಗುಬ್ಬಿಯ ರಾಮಪ್ಪ ಹಂಸಭಾವಿ ಅವರನ್ನು ಮಗಳು ಅಕ್ಷತಾ ಬಿಗಿದಪ್ಪಿ ಅತ್ತ ಭಾವುಕ ಕ್ಷಣ   

ಧಾರವಾಡ: ನೆರೆಹೊರೆಯವರೊಂದಿಗೆ ಜಾಗದ ಸಂಬಂಧ ಅಪ್ಪ ಜಗಳವಾಡುತ್ತಿದ್ದಾಗ ಆ ಬಾಲಕಿಗೆ ಹತ್ತು ವರ್ಷ. ಆ ಜಗಳದಲ್ಲಿ ಒಬ್ಬರನ್ನು ಕೊಂದ ಅಪ್ಪ ಜೈಲು ಸೇರಿದ್ದರು.

ಸನ್ನಡತೆಯ ಆಧಾರದ ಮೇಲೆ ಸೋಮವಾರ ಅವರು ಬಿಡುಗಡೆಯಾಗುವ ಹೊತ್ತಿಗೆ ಮಗಳು ಬಿ.ಕಾಂ. ಪದವಿ ಪೂರೈಸಿದ್ದಳು. ಕಾರಾಗೃಹದ ಹೊರಗೆ ಅಪ್ಪನ ಕಂಡು ಓಡಿ ಬಂದು ತಬ್ಬಿಕೊಂಡ ಆಕೆಯ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿಯತೊಡಗಿತು. ಅಪ್ಪನು ಸೇರಿದಂತೆ ಅಲ್ಲಿದ್ದವರ ಕಣ್ಣಾಲಿಗಳೂ ತೇವಗೊಂಡವು.

ಹಿರೇಕೆರೂರ ತಾಲ್ಲೂಕಿನ ದೊಡ್ಡಗುಬ್ಬಿಯ ರಾಮಪ್ಪ ಹಂಸಭಾವಿಗೆ ಮನೆಯ ಜಾಗಕ್ಕೆ ಸಂಬಂಧಿಸಿದಂತೆ ಪಕ್ಕದ ಮನೆಯವರೊಂದಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಅದು ವಿಕೋಪಕ್ಕೆ ತಿರುಗಿದಾಗ ಹಲವು ಬಾರಿ ಹೊಡೆದಾಟವೂ ಆಗಿತ್ತು.  ಇಂತಹ ಒಂದು ಸಂದರ್ಭದಲ್ಲಿ ರಾಮಪ್ಪ, ಒಬ್ಬರನ್ನು ಹತ್ಯೆ ಮಾಡಿ ಜೈಲು ಸೇರಿದ್ದರು.

ಆಗ ಮಗಳು ಅಕ್ಷತಾ ನಾಲ್ಕನೇ ತರಗತಿ ಓದುತ್ತಿದ್ದಳು. ಬಾಲ್ಯದಿಂದಲೂ ಪಿತೃ ವಾತ್ಸಲ್ಯದಿಂದ ವಂಚಿಳಾಗಿದ್ದ ಅವಳು ಅಪ್ಪನ ನಿರೀಕ್ಷೆಯಲ್ಲಿದ್ದಳು. ತಲೆಯಲ್ಲಿ ಬಿಳಿಕೂದಲಾಗಿ ಕೈಯಲ್ಲೊಂದು ಕವರ್‌ ಹಿಡಿದುಕೊಂಡು ಜೈಲಿನಿಂದ ಹೊರಬಂದ ರಾಮಪ್ಪ ಅವರನ್ನು ಕಂಡೊಡನೆ ಓಡಿ ಬಂದು ಬಿಗಿದಪ್ಪಿಕೊಂಡಳು.

ಇದಕ್ಕೂ ಮೊದಲು ಮಾತನಾಡಿದ ಅಕ್ಷತಾ, ‘ಹುಬ್ಬಳ್ಳಿಯಲ್ಲಿ ಸಂದರ್ಶನಕ್ಕೆ ಹಾಜರಾಗಲು ದೊಡ್ಡಮ್ಮ ಸುವರ್ಣಾ ಅವರೊಂದಿಗೆ ಬಂದಿದ್ದೆ. ಜೈಲಿನಿಂದ ಇಂದು ಕೆಲವರನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿಯಿತು. ಹೀಗಾಗಿ ಇಲ್ಲಿಗೆ ಬಂದೆವು. ಇದು ನಿಜಕ್ಕೂ ನಮಗೆ ಅನಿರೀಕ್ಷಿತ ಸಂತಸ ತಂದಿದೆ.

ಪೆರೋಲ್ ಮೇಲೆ ತಂದೆ ಮನೆಗೆ ಬರುತ್ತಿದ್ದರೂ, ಕೆಲ ದಿನಗಳು ಮಾತ್ರ ನಮ್ಮೊಂದಿಗೆ ಇರುತ್ತಿದ್ದರು. ಅಪ್ಪ ಇಲ್ಲದ ಇಷ್ಟು ವರ್ಷಗಳ ಕಾಲ ದೊಡ್ಡಪ್ಪ ಹಾಗೂ ದೊಡ್ಡಮ್ಮ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ಮನೆಗೆ ತಂದೆ ಬರುತ್ತಿರುವುದು ಸಂತಸ ತಂದಿದೆ’ ಎಂದರು. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಸುವರ್ಣಾ ಅವರ ಕಣ್ಣುಗಳೂ ತೇವಗೊಂಡಿದ್ದವು.

ಬಿಡುಗಡೆ ನಂತರ ಪ್ರತಿಕ್ರಿಯಿಸಿದ ರಾಮಪ್ಪ, ‘ಜೈಲಿನೊಳಗಿದ್ದಾಗ ನನಗೆ ಬದುಕು ಸಾಕಷ್ಟು ಪಾಠ ಕಲಿಸಿದೆ. ಜಗಳವಾಡುತ್ತಿದ್ದ ಸಂದರ್ಭದಲ್ಲಿ ನಾನೇ ಎರಡು ಏಟು ತಿಂದಿದ್ದರೆ ಜೈಲಿನಲ್ಲಿ 14 ವರ್ಷ ಬದುಕು ಸವೆಸುವ ಬದಲಿಗೆ ಕುಟುಂಬದೊಂದಿಗೆ ಕಳೆಯಬಹುದಿತ್ತು.

ಈಗ ಪಾಠ ಕಲಿತಿರುವ ನಾನು, ಕೋಪದ ಕೈಗೆ ಬುದ್ಧಿ ಕೊಡಬೇಡಿ ಎಂದು ಇತರರಿಗೆ ಹೇಳುತ್ತೇನೆ. ಆ ಮೂಲಕ ನನ್ನಂತೆ ಇತರರೂ ಆಗಬಾರದು ಎನ್ನುವುದು ನನ್ನ ಕಾಳಜಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.