ADVERTISEMENT

ಅಬ್ಬರಿಸಿದ ಡ್ರ್ಯಾಗನ್‌, ಮನಸೆಳೆದ ತ್ರಿಡಿ ಹುಲಿ!

ಬೆಳಗಾವಿ ಹಾಗೂ ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 19:40 IST
Last Updated 16 ಜನವರಿ 2016, 19:40 IST
ಬೆಳಗಾವಿಯಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಗಮನ ಸೆಳೆದ ಆಕ್ಟೋಪಸ್‌, ಡ್ರ್ಯಾಗನ್‌ ರೂಪದ ಗಾಳಿಪಟಗಳು / ಪ್ರಜಾವಾಣಿ ಚಿತ್ರ: ಚೇತನ್‌ ಕುಲಕರ್ಣಿ
ಬೆಳಗಾವಿಯಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಗಮನ ಸೆಳೆದ ಆಕ್ಟೋಪಸ್‌, ಡ್ರ್ಯಾಗನ್‌ ರೂಪದ ಗಾಳಿಪಟಗಳು / ಪ್ರಜಾವಾಣಿ ಚಿತ್ರ: ಚೇತನ್‌ ಕುಲಕರ್ಣಿ   

ಬೆಳಗಾವಿ/ಮಂಗಳೂರು: ಬಾನಾಡಿಗಳನ್ನು ಬೆರಗುಗೊಳಿಸಿದ ಕಾಗದದ ಹಕ್ಕಿ, ಅಬ್ಬರಿಸಿದ ಡ್ರ್ಯಾಗನ್, ಆಗಸದಲ್ಲಿ ಈಜಿದ ಮೀನು, ಜೊತೆಗೆ ಗಗನ ಯಾತ್ರಿಗಳು ಒಂದೆಡೆಯಾದರೆ, ಇನ್ನೊಂದೆಡೆ ‘ಸಮಾನತೆ ಮತ್ತು ಏಕತೆ’ ಎಂಬ ದೃಷ್ಟಿಕೋನದಿಂದ ‘ಒಂದೇ ಆಕಾಶ, ಒಂದೇ ನೆಲ, ಒಂದೇ ಕುಟುಂಬ’ ಎಂಬ ಧ್ಯೇಯದೊಂದಿಗೆ ಮಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಎಲ್ಲರ ಮನಸೆಳೆಯಿತು.

ಬೆಳಗಾವಿಯ ನಾನಾವಾಡಿ ಬಳಿಯ ಅಂಗಡಿ ತಾಂತ್ರಿಕ ಮೈದಾನದಲ್ಲಿ, ‘ಪರಿವರ್ತನ ಪರಿವಾರ’ ಸಂಸ್ಥೆ ಆಶ್ರಯದಲ್ಲಿ ಶನಿವಾರ ಆರಂಭಗೊಂಡ 6ನೇ ಗಾಳಿಪಟ ಉತ್ಸವ ಕಣ್ಮನ ಸೆಳೆಯಿತು. ಸಣ್ಣ ಕೈಗಾರಿಕೆ ಸಚಿವ ಸತೀಶ ಜಾರಕಿಹೊಳಿ ಬೆಳಿಗ್ಗೆ ಉತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಬಾನಲ್ಲಿ ಪತಂಗಗಳು ಚಿತ್ತಾರ ಮೂಡಿಸಿದವು.

ಬೃಹದಾಕಾರದ ಬಲೂನ್‌ ಕೈಟ್‌ಗಳು ಬೆರಗುಗೊಳಿಸುತ್ತಿದ್ದರೆ, ಜೆಟ್‌ ವಿಮಾನದಂತೆ ಸದ್ದು ಮಾಡುತ್ತಿದ್ದ ‘ಸ್ಟಂಟ್‌ ಕೈಟ್‌’ಗಳು ರೋಮಾಂಚನ ಮೂಡಿಸಿದವು. ತ್ರಿವರ್ಣ ಧ್ವಜ, ‘ಸ್ಟಾರ್‌’ ಆಕಾರದ 50ಕ್ಕೂ ಹೆಚ್ಚು ಗಾಳಿಪಟಗಳನ್ನು ಒಳಗೊಂಡ ‘ಸರಪಟ’ಆಗಸಕ್ಕೆ ತೋರಣ ಹಾಕಿ, ಹಬ್ಬದ ಮೆರುಗು ನೀಡಿತ್ತು.

ಹಲವು ಪ್ರಾಣಿ– ಜಲಚರ ರೂಪಿ ಪತಂಗಗಳು, ಗಗನಯಾತ್ರಿ ಮಾದರಿಯ ಗಾಳಿಪಟಗಳು, ಡೆಲ್ಟಾ, ಸ್ಟಂಟ್‌ ಕೈಟ್‌ಗಳು ಕಣ್ಮನ ಸೆಳೆದವು. ಕಾಗದದ ಹಕ್ಕಿಗಳನ್ನು ಕಂಡು ಗಿಡುಗವೊಂದು ಅದರ ಮೇಲೆ ಆಗಾಗ ದಾಳಿ ಮಾಡುತ್ತಿತ್ತು. ಕೆಲವು ಸ್ಪರ್ಧಿಗಳು ಕತ್ತಲಾದ ಬಳಿಕ ‘ನೈಟ್‌ ಕೈಟ್‌’ ಹಾರಿಸುವ ಮೂಲಕ ನಕ್ಷತ್ರ ಲೋಕ ಸೃಷ್ಟಿಸಿದರು.  ಸಂಜೆಯಾ ಗುತ್ತಿದ್ದಂತೆ ಮೈದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ಭಾನುವಾರವೂ ಉತ್ಸವ ನಡೆಯಲಿದೆ. 19ರಂದು ವಿದ್ಯಾರ್ಥಿಗಳಿಗೆ ಗಾಳಿಪಟ ಹಾರಿಸಲು ಅವಕಾಶ ಕಲ್ಪಿಸಲಾಗಿದೆ. 

ರಾರಾಜಿಸಿದ ಬಗೆಬಗೆಯ ಗಾಳಿಪಟ (ಮಂಗಳೂರು ವರದಿ): ರೋಟರಿ ಕ್ಲಬ್‌ ಮತ್ತು ಹವ್ಯಾಸಿ ಗಾಳಿಪಟ ತಯಾರಕರು ಮತ್ತು ಹಾರಿಸುವವರ ಸಂಘಟನೆ ‘ಟೀಂ ಮಂಗಳೂರು’ ಸಹಯೋಗದಲ್ಲಿ ಇಲ್ಲಿನ ಪಣಂಬೂರು ಕಡಲತೀರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು.

13 ರಾಷ್ಟ್ರಗಳ ಮತ್ತು ದೇಶದ ವಿವಿಧ ಭಾಗಗಳಿಂದ ಬಂದಿದ್ದ ಗಾಳಿಪಟ ಸ್ಪರ್ಧಿಗಳು ಬಗೆ ಬಗೆಯ ಗಾಳಿಪಟ ಹಾರಿಸುವ ಮೂಲಕ ಉತ್ಸವದ ಕಳೆ ಹೆಚ್ಚಿಸಿದರು. ‘ಸಮಾನತೆ ಮತ್ತು ಏಕತೆ’ ಎಂಬ ದೃಷ್ಟಿಕೋನದಿಂದ ‘ಒಂದೇ ಆಕಾಶ, ಒಂದೇ ನೆಲ, ಒಂದೇ ಕುಟುಂಬ’ ಎಂಬ ಧ್ಯೇಯದೊಂದಿಗೆ ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸ ಲಾಗಿದೆ. ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯ, ಟರ್ಕಿ, ನೆದರ್‌ಲ್ಯಾಂಡ್, ಕಾಂಬೋಡಿಯಾ, ಉಕ್ರೇನ್, ಸಿಂಗ ಪುರ, ಕುವೈತ್, ಥಾಯ್ಲೆಂಡ್, ಇಟಲಿಯ ಸ್ಪರ್ಧಿಗಳು ಬಗೆ ಬಗೆಯ ಗಾಳಿಪಟ ಗಳನ್ನು ಹಾರಿಸಿ ಆಗಸದಲ್ಲಿ ಚಿತ್ತಾರವನ್ನೇ ಮೂಡಿಸಿದರು.

ಆಸ್ಟ್ರೇಲಿಯಾದ ಪೆಟ್ಟಿಗೆ ಮಾದರಿಯ ಗಾಳಿಪಟ, ಯಕ್ಷಗಾನ, ಕಥಕ್ಕಳಿ, 150 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹೋಲುವ ಗಾಳಿಪಟ, ತ್ರಿಡಿ ಹುಲಿ, ಹಡಗು, ಕೆನಡಾ ಹಸು, 100 ಗಾಳಿಪಟಗಳನ್ನು ಹೊಂದಿದ್ದ 300 ಅಡಿ ಉದ್ದದ ಪಕ್ಷಿಗಳ ಟ್ರೇನ್‌ ಗಾಳಿಪಟಗಳು ಮನಸೆಳೆದವು.
ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ ಮನಮೋಹಕ ಗಾಳಿಪಟ ಗಳನ್ನು ನೋಡಿ ಪುಳಕಿತರಾದರು. ಅಲ್ಲಿ ಮಾರಾಟಕ್ಕಿದ್ದ ಗಾಳಿಪಟಗಳನ್ನು ಖರೀ ದಿಸಿ, ಮಕ್ಕಳೊಂದಿಗೆ ಹಾರಿಸಿ ಸಂಭ್ರಮಿ ಸಿದರು. ಉತ್ಸವದಲ್ಲಿ ಗಾಳಿಪಟ ಗಳು ಮನಕ್ಕೆ ಮುದ ನೀಡಿದರೆ, ಅಲ್ಲಿ ಸ್ಥಾಪಿಸ ಲಾಗಿದ್ದ ಆಹಾರ ಮಳಿಗೆಗಳಲ್ಲಿ ಲಭ್ಯವಿದ್ದ ವೈವಿಧ್ಯಮಯ ಖಾದ್ಯಗಳು ಜನರು ಬಾಯಿ ಚಪ್ಪರಿಸುವಂತೆ ಮಾಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.