ADVERTISEMENT

ಅಮಾನತುಗೊಂಡ ಪಿಡಿಒ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಮೈಸೂರು:  ವಿಜಾಪುರ ಮೂಲದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಗರದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಜರುಗಿದೆ.

ವಿಜಾಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮದ ನಿವಾಸಿ, ಮೈಸೂರು ಜಿಲ್ಲಾಧಿಕಾರಿ ಕಚೇರಿಯ ನಗರ ಯೋಜನಾ ನಿರ್ದೇಶಕಿ ಮಾಯಾದೇವಿ ಗಲಗಲಿ ಅವರ ಸಹೋದರ ಅರುಣ್‌ಕುಮಾರ್ ಗಲಗಲಿ (29) ಆತ್ಮಹತ್ಯೆಗೆ ಶರಣಾದವರು.

ಕೆಪಿಟಿಸಿಎಲ್ ಮತ್ತು ಕೆಎಸ್‌ಆರ್‌ಟಿಸಿಯಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅರುಣ್‌ಕುಮಾರ್ ಗ್ರಾಮೀಣ ಸೇವೆ ಮಾಡಬೇಕೆಂಬ ಹಂಬಲದಿಂದ ಪಿಡಿಒ ಪರೀಕ್ಷೆ ಬರೆದು ವಿಜಾಪುರ ಜಿಲ್ಲೆಯ ಅಗರಖೇಡ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಸೇವೆ ಆರಂಭಿಸಿದರು. ಬಳಿಕ ದೂದ್‌ಖೇಡ ಗ್ರಾಮ ಪಂಚಾಯಿತಿಗೆ ಇವರನ್ನು ವರ್ಗಾವಣೆ ಮಾಡಲಾಯಿತು. ಉದ್ಯೋಗ ಖಾತರಿ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಆರೋಪದಲ್ಲಿ ನಾಲ್ಕು ತಿಂಗಳ ಹಿಂದೆ ಅರುಣ್‌ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಇದರಿಂದ ಇವರು ಬೇಸತ್ತಿದ್ದರು.

ADVERTISEMENT

ಸಿದ್ದಾರ್ಥ ಬಡಾವಣೆಯ ಅಹಿಂಸಾ ಮಾರ್ಗದಲ್ಲಿ ನೆಲೆಸಿರುವ ಮಾಯಾದೇವಿ ಗಲಗಲಿ ಅವರ ಮನೆಗೆ ಅರುಣ್‌ಕುಮಾರ್ ಈಚೆಗೆ ಬಂದಿದ್ದರು. ಮಧ್ಯಾಹ್ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. `ನನ್ನ ಸಾವಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರಣ~ ಎಂದು ಅರುಣ್‌ಕುಮಾರ್ ಆತ್ಮಹತ್ಯೆಗೂ ಮುನ್ನ ಸುಮಾರು ಐದು ಪುಟಗಳ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು. ನಜರ್‌ಬಾದ್ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಮಾಯಾದೇವಿ ಗಲಗಲಿ ಅವರ ಮನೆ ಮುಂದೆ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.