ADVERTISEMENT

ಅರಣ್ಯ ರಕ್ಷಕರಿಗೆ ಸಿಗದ ವಿಮೆ ಸೌಲಭ್ಯ

ಪಾಲನೆಯಾಗದ ಅರಣ್ಯ ಇಲಾಖೆ ಸೂಚನೆ

ಅಮಿತ್ ಎಂ.ಎಸ್.
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST

ಚಾಮರಾಜನಗರ: ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅರಣ್ಯ ಇಲಾಖೆಯ ದಿನಗೂಲಿ ಮತ್ತು ಕಾಯಂ ನೌಕರರಿಗೆ ವಿಮೆ ಮಾಡಿಸಬೇಕೆಂಬ ಸರ್ಕಾರದ ಸೂಚನೆ ಪಾಲನೆಯಾಗುತ್ತಿಲ್ಲ.

ರಾಜ್ಯದ ಹುಲಿ ರಕ್ಷಿತಾರಣ್ಯ ಮತ್ತು ವನ್ಯಜೀವಿ ವಲಯಗಳಲ್ಲಿ ಸಾವಿರಕ್ಕೂ ಅಧಿಕ ಸಿಬ್ಬಂದಿ ಹಗಲು–ರಾತ್ರಿ ದುಡಿಯುತ್ತಿದ್ದಾರೆ. ಆಕಸ್ಮಿಕವಾಗಿ ನೌಕರರು ಮೃತಪಟ್ಟರೆ ಆರ್ಥಿಕ ನೆರವು ಸಿಗದಾಗಿದೆ.

5 ವರ್ಷದ ಹಿಂದೆಯೇ ಸೂಚನೆ: ದಿನಗೂಲಿ, ಕಾಯಂ ಮತ್ತು ತಾತ್ಕಾಲಿಕ ನೌಕರರಿಗೆ ಅಪಘಾತ ಸಂಭವಿಸಿದರೆ ಆರ್ಥಿಕ ನೆರವು ನೀಡಲು ಬೇರೆ ಸೌಲಭ್ಯ ಇಲ್ಲದೆ ವಿಮೆ ಮಾಡಿಸುವಂತೆ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ 2012ರ ಡಿಸೆಂಬರ್‌ 6ರಂದು ಆದೇಶ ಹೊರಡಿಸಿದ್ದಾರೆ.

ADVERTISEMENT

ಹುಲಿ ಸಂರಕ್ಷಿತ ಪ್ರದೇಶಗಳ ನೌಕರರಿಗೆ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಯಿಂದ ದೊರೆಯುವ ಆರ್ಥಿಕ ಸೌಲಭ್ಯವನ್ನು ಬಳಸಿಕೊಂಡು ‘ಗ್ರೂಪ್ ಜನತಾ ಪರ್ಸನಲ್‌ ಆ್ಯಕ್ಸಿಡೆಂಟ್‌ ಪಾಲಿಸಿ’ಯನ್ನು ಮಾಡಿಸುವಂತೆ ಸೂಚಿಸಲಾಗಿದೆ.

ಅದೇ ರೀತಿ ವನ್ಯಜೀವಿ ವಿಭಾಗ ಮತ್ತು ಉಪವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿಮೆ ಸೌಲಭ್ಯ ಕಲ್ಪಿಸಲು ಅನುದಾನಕ್ಕೆ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿತ್ತು. ಈ ಪ್ರಸ್ತಾವನೆಯನ್ನು ರಕ್ಷಿತ ಅರಣ್ಯ ಅಭಿವೃದ್ಧಿ ನಿಧಿ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ಹೇಳಿತ್ತು.

ಹುಣಸೂರು, ಬಿಆರ್‌ಟಿ, ಭದ್ರಾ ಮತ್ತು ದಾಂಡೇಲಿ– ಅಣಶಿ ಹುಲಿ ಸಂರಕ್ಷಿತ ಪ್ರದೇಶಗಳು, ಮೈಸೂರು, ಮಡಿಕೇರಿ, ಶಿವಮೊಗ್ಗ, ಕಾರ್ಕಳ ಮತ್ತು ಕೊಳ್ಳೇಗಾಲ ವನ್ಯಜೀವಿ ವಿಭಾಗ ಹಾಗೂ ರಾಣೆಬೆನ್ನೂರು ಮತ್ತು ದರೋಜಿ ವನ್ಯಜೀವಿ ಉಪವಿಭಾಗಗಳಿಗೆ ತುರ್ತು ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು.

ಆದರೆ, ಈ ಸೂಚನೆ ಅನೇಕ ವನ್ಯಜೀವಿಧಾಮಗಳಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ ಎನ್ನುವುದು ದಿನಗೂಲಿ ನೌಕರರ ಆರೋಪ. ಕೆಲವೆಡೆ ವಿಮೆ ಅವಧಿ ಮುಗಿದರೂ ನವೀಕರಣ ಆಗಿಲ್ಲ ಎಂದು ದೂರಿದ್ದಾರೆ.

ಇತ್ತೀಚೆಗೆ ಬೈಕ್‌ ಅಪಘಾತಕ್ಕೆ ಬಲಿಯಾದ ಮಲೆಮಹದೇಶ್ವರ ವನ್ಯಜೀವಿಧಾಮದ ರಾಮಪುರ ವಲಯದ ಜೀಪ್ ಚಾಲಕ ಅವಲಯ್ಯ ಮತ್ತು ಅನಾರೋಗ್ಯದಿಂದ ಮೃತಪಟ್ಟ ಬಿಆರ್‌ಟಿ ಬೈಲೂರು ವಲಯದ ಅರಣ್ಯ ವೀಕ್ಷಕ ಆನೆ ಜಡೆಯಪ್ಪ ಅವರಿಗೆ ಯಾವುದೇ ಆರ್ಥಿಕ ನೆರವು ದೊರೆತಿಲ್ಲ.

***
ಬಂಡಿಪುರ ಮಾದರಿ
ಮುಂಚೂಣಿ ಸಿಬ್ಬಂದಿಗೆ ವಿಮೆ ರಕ್ಷಣೆ ನೀಡುವ ಸೌಲಭ್ಯ ಮೊದಲು ಜಾರಿಯಾಗಿದ್ದು ಬಂಡಿಪುರ ಹುಲಿ ರಕ್ಷಿತಾರಣ್ಯದಲ್ಲಿ. 263 ದಿನಗೂಲಿ, ತಾತ್ಕಾಲಿಕ ಹಾಗೂ 208 ಕಾಯಂ ನೌಕರರಿಗೆ ಬಂಡಿಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನದ ನಿಧಿಯಿಂದ ವಿಮೆ ಕಲ್ಪಿಸಲಾಗಿತ್ತು. ಈ ಮಾದರಿಯನ್ನೇ ಉಳಿದ ವಲಯಗಳಲ್ಲಿ ಅನುಸರಿಸುವಂತೆ ಕೇಂದ್ರ ಕಚೇರಿ ತಿಳಿಸಿತ್ತು.

‘ನಮ್ಮಲ್ಲಿನ ಎಲ್ಲ ದಿನಗೂಲಿ, ಕಾಯಂ ನೌಕರರಿಗೆ ವಿಮೆ ಸೌಲಭ್ಯವನ್ನು ತಪ್ಪದೆ ನೀಡುತ್ತಿದ್ದೇವೆ. ಕೆಲವು ನಿರ್ದಿಷ್ಟ ಅವಧಿಗಳಲ್ಲಿ ಮಾತ್ರ ಬಂದು ಹೋಗುವ ಕೆಲಸಗಾರರಿಗೆ ಈ ಸೌಲಭ್ಯ ಇರುವುದಿಲ್ಲ’ ಎಂದು ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.

***
ಕಾರಣಾಂತರಗಳಿಂದ ವಿಮೆ ನವೀಕರಣ ಕಾರ್ಯ ವಿಳಂಬವಾಗಿದೆ. ವಲಯದ ಎಲ್ಲ ದಿನಗೂಲಿ ಮತ್ತು ಕಾಯಂ ನೌಕರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ
ಶಂಕರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಆರ್‌ಟಿ

***
ಕೆಳವರ್ಗದ ಕೆಲಸಗಾರರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪಿಎಫ್‌ ಮತ್ತು ವಿಮೆ ನೀಡಬೇಕೆಂಬ ಸೂಚನೆ ಇದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಿದ್ದೇನೆ
ಮಲ್ಲೇಶಪ್ಪ, ಸದಸ್ಯ, ರಾಜ್ಯ ವನ್ಯಜೀವಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.