ADVERTISEMENT

ಅರ್ಜುನನ ಹೆಗಲಿಗೆ ಚಿನ್ನದ ಅಂಬಾರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಮೈಸೂರು: ಈ ಬಾರಿಯ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಬಲರಾಮನ ಬದಲು ಅರ್ಜುನ ಹೊರಲಿದ್ದಾನೆ. ಕಳೆದ ವರ್ಷ ಅಂಬಾರಿ ಹೊತ್ತಿದ್ದ ಬಲರಾಮ ಆನೆ ದೈಹಿಕವಾಗಿ ಕುಗ್ಗಿದ್ದು ತೂಕದಲ್ಲಿ ಕಡಿಮೆ ಆಗಿರುವುದರಿಂದ ಈ ಬಾರಿ ಅರ್ಜುನ ಅಂಬಾರಿ ಹೊರಲು ಸಮರ್ಥ ಎಂಬ ನಿರ್ಧಾರಕ್ಕೆ ಬರಲಾಗಿದೆ. ಬಳ್ಳೆ ಶಿಬಿರದ 52 ವರ್ಷದ ಅರ್ಜುನನ್ನು 1968 ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು.

ಈ ಹಿಂದೆ ಒಮ್ಮೆ ಅರ್ಜುನ ಚಿನ್ನದ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ. ಸುಮಾರು 16 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಅರ್ಜುನ ಪಾಲ್ಗೊಂಡಿದ್ದಾನೆ. 3.75 ಮೀಟರ್ ಎತ್ತರವಿರುವ ಅರ್ಜುನ ಬರೋಬ್ಬರಿ 5,500 ಕೆ.ಜಿ ಇದ್ದಾನೆ.

ಚಿನ್ನದ ಅಂಬಾರಿ 750 ಕೆಜಿ ತೂಕವಿದೆ. ಮೆರವಣಿಗೆಯ ಕೊನೆಯ ಆಕರ್ಷಣೆಯಾದ ಚಿನ್ನದ ಅಂಬಾರಿಯಲ್ಲಿ ನಾಡಿನ ಕುಲದೇವತೆ ತಾಯಿ ಚಾಮುಂಡೇಶ್ವರಿ ವಿರಾಜಮಾನಳಾಗಿರುತ್ತಾಳೆ. ಅರಮನೆ ಆವರಣದಿಂದ ಮೆರವಣಿಗೆ ಹೊರಟು ರಾಜಮಾರ್ಗದಲ್ಲಿ ಸಾಗಿ 5 ಕಿ.ಮೀ. ದೂರ ಕ್ರಮಿಸಿ ಬನ್ನಿಮಂಟಪದಲ್ಲಿ ಅಂತ್ಯವಾಗಲಿದೆ.

`ಅರ್ಜುನನೇ ಚಿನ್ನದ ಅಂಬಾರಿ ಹೊರುವ ಆನೆ ಎಂದು ನಿರ್ಧರಿಸಿದ ಬಳಿಕ 750 ಕೆಜಿ ಅಂಬಾರಿ ಹೋಲುವ ಮರವನ್ನು ಬೆನ್ನಿನ ಮೇಲೆ ಇರಿಸಿ ಅರ್ಜುನನಿಗೆ ನಿತ್ಯ ರಾಜಮಾರ್ಗದಲ್ಲಿ ತಾಲೀಮು ನಡೆಸಲಾಗುತ್ತಿದೆ. ಅರ್ಜುನನಿಗೆ ಕಾಂತಿ ಮತ್ತು ಚೈತ್ರ ಹೆಣ್ಣು ಆನೆಗಳು ಸಾಥ್ ನೀಡಲಿವೆ~ ಆನೆ ವೈದ್ಯ ಡಾ. ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.