ADVERTISEMENT

ಅರ್ಜುನ ಜನ್ಯ ಜತೆ ಹೆಜ್ಜೆ ಹಾಕಿದ ಸಚಿವ ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 16:47 IST
Last Updated 5 ಮಾರ್ಚ್ 2018, 16:47 IST
ಅರ್ಜುನ ಜನ್ಯ ಜತೆ ಹೆಜ್ಜೆ ಹಾಕಿದ ಸಚಿವ ಶರಣಪ್ರಕಾಶ ಪಾಟೀಲ
ಅರ್ಜುನ ಜನ್ಯ ಜತೆ ಹೆಜ್ಜೆ ಹಾಕಿದ ಸಚಿವ ಶರಣಪ್ರಕಾಶ ಪಾಟೀಲ   

ಕಲಬುರ್ಗಿ: ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರ ಜತೆ 'ಅಧ್ಯಕ್ಷ' ಹಾಡಿಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಪ್ರೇಕ್ಷಕರನ್ನು ರಂಜಿಸಿದರು.

ಜಿಲ್ಲೆಯ ಸೇಡಂ ತಾಲ್ಲೂಕು ಮಳಖೇಡದಲ್ಲಿ ರಾಷ್ಟ್ರಕೂಟ ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಚಿವರು ಹೆಜ್ಜೆ ಹಾಕಿದರು.

‘ಹುಡುಗಿಯು ತನ್ನ ನೋಡಂಗಿಲ್ಲ, ಇವರನ್ನು ಬಿಟ್ಟು ಇಲ್ಲಿ ಯಾರೂ ಇಲ್ಲ’ ಎಂದು ಹೇಳಿ ಸಚಿವರನ್ನು ನೃತ್ಯ ಮಾಡುವಂತೆ ಅರ್ಜುನ ಜನ್ಯ ಹೇಳಿದರು. ಆಗ ಮುಜುಗರಕ್ಕೆ ಒಳಗಾದ ಸಚಿವರು ಹಿಂದೇಟು ಹಾಕಿದರು. ಆದರೆ ಜನ್ಯ ಅವರು, ‘ಇವರೇ ನಮ್ಮ ಅಧ್ಯಕ್ಷ, ಅಧ್ಯಕ್ಷ’ ಎಂದು ಹಾಡುತ್ತಲೇ ಸಚಿವರ ಕೈ ಮೇಲೆತ್ತಿ ಕುಣಿಯಲು ಆರಂಭಿಸಿದರು. ಆಗ ಸಚಿವರು ಅನಿವಾರ್ಯವಾಗಿ ಹೆಜ್ಜೆ ಹಾಕಿದರು.

ADVERTISEMENT

ಸಚಿವರು ಕುಣಿಯುತ್ತಿರುವುದನ್ನು ಕಂಡ ಯುವಕರು ‘ಯಾವೂ’ ಎಂದು ಕುಣಿದು ಕುಪ್ಪಳಿಸಿದರು. ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಖುಷಿಪಟ್ಟರು.

ಉದಯೋನ್ಮುಖ ಗಾಯಕರಾದ ಚಿನ್ಮಯ ಮತ್ತು ಅನುರಾಧ ಭಟ್ ಅವರು ಯುಗಳ ಗೀತೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಇದಾದ ಬಳಿಕ ಅರ್ಜುನ ಜನ್ಯ ಅವರು ಹೆಬ್ಬುಲಿ, ಮುಕುಂದ ಮುರಾರಿ ಸಿನಿಮಾದ ಹಾಡು ಹೇಳಿದರು. ನೀ ನೀರಿಗೆ ಬಾರೆ ಚೆನ್ನಿ, ಬಿಂದಿಗೆ ತೊಗೊಂಡು, ನಾ ನೋಡಾಕ ಬರ್ತೀನಿ.. ನಿನ್ನ ಹಸುವಾ ಹೊಡ್ಕೊಂಡು.. ಹಾಡನ್ನು ಸಂಗೀತ ಪರಿಕರಗಳ ಮೂಲಕ ಪ್ರಸ್ತುತಪಡಿಸಿ, ನೆರೆದ ಜನರನ್ನು ಮಂತ್ರ ಮುಗ್ಧರನ್ನಾಗಿಸಿದರು.

ನಿರೂಪಕಿ ಅನುಶ್ರೀ ಅವರು ಹಾಯ್ ಮಳಖೇಡ.. ಎಲ್ಲಿ ನಮ್ಮ ಪಡ್ಡೆ ಹುಡುಗರು.. ಟಪ್ಪಾಂಗುಚ್ಚಿ ಹಾಡಿಗೆ ಹೆಜ್ಜೆ ಹಾಕಿ ಎಂದು ಹೇಳುತ್ತ ಎಲ್ಲರನ್ನೂ ಹುರಿದುಂಬಿಸಿದರು.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.