ADVERTISEMENT

ಅಶ್ವಿನಿ ಎಂಬ ಆಶಾಕಿರಣ!

ಎನ್.ಸಿದ್ದರಾಜಯ್ಯ
Published 15 ಮೇ 2011, 19:30 IST
Last Updated 15 ಮೇ 2011, 19:30 IST
ಅಶ್ವಿನಿ ಎಂಬ ಆಶಾಕಿರಣ!
ಅಶ್ವಿನಿ ಎಂಬ ಆಶಾಕಿರಣ!   

ಮೈಸೂರು: ಅಮ್ಮ ಹರಿದ ಬಟ್ಟೆಗೆ ರೂಪು ನೀಡುತ್ತಾ, ಮಸಿ ಬಳಿದ ಪಾತ್ರೆಗಳಿಗೆ ಹೊಳಪು ತರುತ್ತಾ ಜೀವ ಸವೆಸುತ್ತಿದ್ದಾಳೆ. ಇಂಥ  ಅಮ್ಮನ ಬಾಡಿದ ಮುಖದಲ್ಲೂ ನಗುವನ್ನು ತಂದಿರುವುದು, ದಾರಿದ್ರ್ಯ ತುಂಬಿದ ಕುಟುಂಬಕ್ಕೆ ಭರವಸೆಯ ಬೆಳಕಿನಂತೆ ಗೋಚರಿಸಿರುವುದು  ಮನೆಯ ಹಿರಿ ಮಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ!

ಹೌದು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ 93.76 ಫಲಿತಾಂಶ ಪಡೆದ ಅಶ್ವಿನಿ ಕುಟುಂಬಕ್ಕೆ ನೆರವಾಗುವ ಆಶಾಕಿರಣವಾಗಿ ಕಾಣಿಸಿಕೊಂಡಿದ್ದಾರೆ. ಬಡತನವನ್ನೇ ಹಾಸಿ ಹೊದ್ದು ಮಲಗುವ ಕುಟುಂಬದಲ್ಲಿ ಮಗಳ ಉತ್ತಮ ಫಲಿತಾಂಶ ಸಹಜವಾಗಿಯೇ ಸಂತಸ ತಂದಿದೆ. ಮಗಳು ಚೆನ್ನಾಗಿ  ಓದಿ ನೌಕರಿ ಗಿಟ್ಟಿಸಿ ಕುಟುಂಬಕ್ಕೆ ನೆರವಾಗುತ್ತಾಳೆ ಎಂಬುದು ತಾಯಿಯ ನಂಬಿಕೆ.

ಎನ್.ಅಶ್ವಿನಿ ಮೈಸೂರಿನ ಶ್ರೀ ಕೆ.ಪುಟ್ಟಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಅಶ್ವಿನಿಯ ತಂದೆ ನಾಗೇಶ್ ಗಾರೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಟ್ಟಡದಿಂದ ಬಿದ್ದು ವರ್ಷದ ಹಿಂದೆ ತೀರಿಕೊಂಡರು. ಆಗ ಕುಟುಂಬದ   ಜವಾಬ್ದಾರಿಯ ನೊಗ ಹೊತ್ತದ್ದು ತಾಯಿ ಶೋಭ. ಅವರು ಮನೆಗೆಲಸ, ಬಿಡುವಿನ ವೇಳೆಯಲ್ಲಿ ಟೈಲರಿಂಗ್ ಮಾಡಿ ಅದರಿಂದ ಬಂದ ಸಂಪಾದನೆಯಿಂದ ಬಾಡಿಗೆ ಮನೆಯಲ್ಲಿ ಮಕ್ಕಳೊಂದಿಗೆ  ವಾಸಿಸುತ್ತಾ, ಅವರ ವಿದ್ಯಾಭ್ಯಾಸಕ್ಕೆ ಆಸರೆಯಾದರು. ಶೋಭಗೆ ಅಶ್ವಿನಿ, ಸುಮತಿ ಮತ್ತು ಅನುಷಾ ಮಕ್ಕಳಿದ್ದಾರೆ.

ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಹಗಲಿರುಳು ದುಡಿಯುತ್ತಿದ್ದ ತಾಯಿಯ ಕಷ್ಟ ಅರ್ಥ ಮಾಡಿಕೊಂಡ ಅಶ್ವಿನಿ ಕಠಿಣ ಅಭ್ಯಾಸ ಮಾಡಿ ಉತ್ತಮ ಅಂಕ ಗಳಿಸಿದ್ದಾರೆ. ಕನ್ನಡದಲ್ಲಿ 125ಕ್ಕೆ 124, ವಿಜ್ಞಾನದಲ್ಲಿ 98, ಗಣಿತ ಮತ್ತು ಸಮಾಜದಲ್ಲಿ 94, ಹಿಂದಿ 91,  ಇಂಗ್ಲಿಷ್ 85 ಅಂಕಗಳನ್ನು ಪಡೆದಿದ್ದಾರೆ.

ಅಶ್ವಿನಿ ಪ್ರತಿದಿನ ನಸುಕಿನ 3.30ಕ್ಕೆ ಎದ್ದು ಬೆಳಿಗ್ಗೆ 7ರ ವರೆಗೂ ಓದುತ್ತಿದ್ದರು. ಶಾಲೆಯಲ್ಲಿ ಗುಂಪು  ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ರಾಮಕೃಷ್ಣ ಆಶ್ರಮದವರು ಸಂಜೆ 5 ರಿಂದ 7ರ ವರೆಗೆ ನಡೆಸುತ್ತಿದ್ದ ವಿಶೇಷ ತರಗತಿಗೆ ಹಾಜರಾಗುತ್ತಿದ್ದರು. ನಂತರ ಮನೆಯಲ್ಲಿ ರಾತ್ರಿ 8 ರಿಂದ 10ರ ವರೆಗೆ ಅಧ್ಯಯನ ಮಾಡುತ್ತಿದ್ದರು.

ಅಶ್ವಿನಿಯ ಪ್ರತಿಭೆ ಮೆಚ್ಚಿ ರಾಮಕೃಷ್ಣ ಆಶ್ರಮದವರು ರೂ.1500 ಪ್ರೋತ್ಸಾಹ ಧನ ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿಯಿಂದ ಬಡ ಮಕ್ಕಳಿಗೆ ನೀಡುವ ಪ್ರಾಯೋಜಿತ ಕಾರ್ಯಕ್ರಮದಡಿ ನೀಡುವ ರೂ.300 ಮಾಸಿಕ ಧನ ಅಶ್ವಿನಿಯ ವ್ಯಾಸಂಗಕ್ಕೆ ನೆರವಾಯಿತು. ಆದರೆ  ಎಂಜಿನಿಯರಿಂಗ್ ಆಗಬೇಕು ಎಂದು ಕನಸು ಕಾಣುತ್ತಿರುವ ಅಶ್ವಿನಿಯ ಮುಂದಿನ ವಿದ್ಯಾಭ್ಯಾಸಕ್ಕೆ ಬಡತನ ಅಡ್ಡಿಯಾಗಿದೆ.

ಮಗಳನ್ನು ಹೇಗಾದರೂ ಓದಿಸಲೇಬೇಕು ಎಂದು ತಾಯಿ ಟೊಂಕ ಕಟ್ಟಿ ನಿಂತಿದ್ದರೂ, ದುಬಾರಿ ಶುಲ್ಕದಿಂದ ಕೂಡಿರುವ ಎಂಜಿನಿಯರಿಂಗ್ ಪದವಿ ಗಗನ ಕುಸುಮವಾಗಿದೆ. ಆದ್ದರಿಂದ ಈ ಕುಟುಂಬಕ್ಕೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ.

ನೆರವು ನೀಡುವವರು  ಮೈಸೂರಿನ ಬನ್ನಿಮಂಟಪದ ಹೈವೇ ವೃತ್ತದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ( ಖಾತೆ ಸಂಖ್ಯೆ 7511) ಹಣ ಸಂದಾಯ ಮಾಡಬಹುದು (ಮೊ:9900889316).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.