ಹಾಸನ: ಒಂದು ವಾರದಿಂದ ಇಲ್ಲಿನ ವೈದ್ಯಕೀಯ ಕಾಲೇಜಿನ ಮುಂದೆ ಮೌನ ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗ ಕಳೆದುಕೊಂಡ ಕಾಲೇಜಿನ ಬೋಧಕೇತರ ಸಿಬ್ಬಂದಿ ಮಂಗಳವಾರದಿಂದ ಅಹೋರಾತ್ರಿ ಆಮರಣಾಂತ ಉಪವಾಸ ಆರಂಭಿಸಿದ್ದಾರೆ.‘ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಯಾರೂ ನಮ್ಮತ್ತ ಗಮನ ಹರಿಸದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.
ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗ ಪಡೆದು, ಕೆಲಸಕ್ಕೆ ಹಾಜರಾಗಿ 15ನೇ ದಿನಕ್ಕೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಿಂದ ಎಲ್ಲ 291 ಸಿಬ್ಬಂದಿಯನ್ನು ವಜಾಗೊಳಿಸಲಾಗಿತ್ತು. ಆಗ (ಆಗಸ್ಟ್ 26, 2010) ಸುಮಾರು ಒಂದೂವರೆ ತಿಂಗಳು ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು.
ಹೈಕೋರ್ಟ್ ಮಧ್ಯಂತರ ತೀರ್ಪಿನಿಂದ ಪ್ರತಿಭಟನೆ ಕೈಬಿಟ್ಟಿದ್ದರು. ಇದಾಗಿ ಆರು ತಿಂಗಳಾಗಿದ್ದರೂ ಸರ್ಕಾರ ಇವರತ್ತ ಗಮನ ಹರಿಸಿರಲಿಲ್ಲ. ಈಚೆಗೆ ಸ್ಥಳೀಯ ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿದ ವೈದ್ಯಕೀಯ ಕಾಲೇಜಿನ ನಿರ್ದೇಶಕರು ಗುತ್ತಿಗೆ ಆಧಾರದಲ್ಲಿ 150 ಸಿಬ್ಬಂದಿಯನ್ನು ತೆಗೆದುಕೊಳ್ಳಲು ಟೆಂಡರ್ ಕರೆದಿದ್ದರು.ಇದರಿಂದ ದಿಗಿಲುಗೊಂಡ ಈ ನೌಕರರು ಮಾ.1ರಿಂದ ಕಾಲೇಜಿನ ಮುಂದೆ ಪುನಃ ಮೌನ ಪ್ರತಿಭಟನೆ ಆರಂಭಿಸಿದ್ದರು.
ವಾರವಾದರೂ ಇನ್ನೂ ಯಾರೂ ತಮ್ಮ ಗೋಳನ್ನು ಆಲಿಸಲು ಬಂದಿಲ್ಲ ಎಂಬ ಕಾರಣಕ್ಕೆ ಮಂಗಳವಾರದಿಂದ ಆಮರಣಾಂತ ಉಪವಾಸ ಆರಂಭಿಸಿದ್ದಾರೆ.ಮಂಗಳವಾರ ಬೆಳಿಗ್ಗೆ ವೈದ್ಯಕೀಯ ಕಾಲೇಜಿನ ಮುಂದೆ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.