ADVERTISEMENT

ಆಂಧ್ರ ರೈತರಿಂದ ಓಎಂಸಿ ಕಚೇರಿ ಧ್ವಂಸ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಬಳ್ಳಾರಿ: ಸಿಬಿಐ  ಬಂಧಿಸಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ಕಚೇರಿಯ ಮೇಲೆ ಶನಿವಾರ ಮಧ್ಯಾಹ್ನ ದಾಳಿ ನಡೆಸಿದ ಆಂಧ್ರದ ರೈತರು ಗಣಿ ಪ್ರದೇಶದಲ್ಲಿರುವ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಆಂಧ್ರದ ಓಬಳಾಪುರಂ ಬಳಿಯ 515 ಎಕರೆ ಜಮೀನನ್ನು ಆಂಧ್ರ ಪ್ರದೇಶದ ಕೈಗಾರಿಕಾ ಅಭಿವೃದ್ದಿ ನಿಗಮವು ರೈತರಿಂದ ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಂಡು, ಓಎಂಸಿಗೆ ಅದಿರು ಸಂಗ್ರಹಕ್ಕಾಗಿ ನೀಡಿದೆ. ಅಕ್ರಮ ಗಣಿಗಾರಿಕೆ ಆರೋಪದಲ್ಲಿ 2 ವರ್ಷಗಳಿಂದ ಆ ಪ್ರದೇಶದಲ್ಲಿ ಗಣಿ ಚಟುವಟಿಕೆಯನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿ ಆದೇಶಿಸಿತ್ತು. ಈ ಜಮೀನನ್ನು ಕೂಡಲೇ ತಮಗೆ ಹಿಂತಿರುಗಿಸಬೇಕು ಎಂದು ಕೋರಿ ಕೆಲವು ರೈತರು ಆಂಧ್ರದ ಎಡ ಪಕ್ಷದ ಬೆಂಬಲದೊಂದಿಗೆ ದಾಳಿ ನಡೆಸಿದರು.

ಆಂಧ್ರಪ್ರದೇಶ ರೈತ ಸಂಘದ ಅಧ್ಯಕ್ಷ ರಾಮಕೃಷ್ಣ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ಮತ್ತು ರೈತರು ಓಬಳಾಪುರಂ ಗ್ರಾಮದಿಂದ ಗಣಿ ಪ್ರದೇಶಕ್ಕೆ ಪಾದಯಾತ್ರೆ ಮೂಲಕ ತೆರಳಿ, ತಮ್ಮ ಜಮೀನನ್ನು ವಾಪಸ್ ನೀಡುವಂತೆ ಕೋರಿದರು.

ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾಗಿ ಜಮೀನಿನಲ್ಲಿ ಪಕ್ಷದ ಧ್ವಜ ನೆಟ್ಟ ರೈತರು, ಓಎಂಸಿ ಕಚೇರಿಯ ಕಿಟಕಿಗಳ ಗಾಜುಗಳನ್ನು ಪುಡಿ ಮಾಡಿ, ಪೀಠೋಪಕರಣ ಧ್ವಂಸಗೊಳಿಸಿದರು. ಕೆಲವು ಟೆಂಟ್‌ಗಳನ್ನು ಕಿತ್ತೆಸೆದರು. ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಇದ್ದರೂ ರೈತರ ದಾಳಿಯನ್ನು ಮೌನವಾಗಿ ವೀಕ್ಷಿಸಿದರು.

ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ರೆಡ್ಡಿ ಸಹೋದರರು, ಶಾಸಕ ಬಿ.ಶ್ರೀರಾಮುಲು, ರಾಯದುರ್ಗ ಶಾಸಕ ರಾಮಚಂದ್ರ ರೆಡ್ಡಿ ಅವರ ವಿರುದ್ಧವೂ ಅಪರಾಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ ಆರೋಪ ಹೊತ್ತಿರುವ ಆಂಧ್ರದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.