ADVERTISEMENT

ಆಗುಂಬೆ ಪ್ರವಾಸಿ ತಾಣ ವೀಕ್ಷಣೆಗೆ ಕಡಿವಾಣ

ಅರಣ್ಯ ಇಲಾಖೆಯಿಂದ ಪ್ರವಾಸಿಗರು ಪರವಾನಗಿ ಪಡೆಯುವುದು ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 19:30 IST
Last Updated 7 ಅಕ್ಟೋಬರ್ 2017, 19:30 IST
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ನಿತ್ಯಹರಿದ್ವರ್ಣ ಕಾಡಿನ ವಿಹಂಗಮ ನೋಟ.
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ನಿತ್ಯಹರಿದ್ವರ್ಣ ಕಾಡಿನ ವಿಹಂಗಮ ನೋಟ.   

ತೀರ್ಥಹಳ್ಳಿ: ಯುನೆಸ್ಕೊದ ವಿಶ್ವ ಪಾರಂಪರಿಕ ತಾಣ ಎಂಬ ಮಾನ್ಯತೆ ಪಡೆದಿರುವ ಆಗುಂಬೆ ಭಾಗದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆಗೆ ಅರಣ್ಯ ಇಲಾಖೆಯು ಅಕ್ರಮ ಪ್ರವೇಶ ನಿಷೇಧದಡಿ ಕಡಿವಾಣ ಹಾಕಿದೆ.

ಜಲಪಾತ, ಗೊಂಡಾರಣ್ಯ, ಅಪರೂಪದ ಸಸ್ಯ ಪ್ರಭೇದ, ಸೂರ್ಯಾಸ್ತ ಸ್ಥಳವು ಆಗುಂಬೆಯನ್ನು ಪ್ರವಾಸಿ ಕೇಂದ್ರವಾಗಿಸಿದೆ. ಸೂರ್ಯಾಸ್ತದ ಸ್ಥಳ ಹೊರತುಪಡಿಸಿ ಅರಣ್ಯದೊಳಗಿನ ಪ್ರವಾಸಿ ಸ್ಥಳಗಳಿಗೆ ತೆರಳಲು ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

‘ದಕ್ಷಿಣ ಭಾರತದ ಚಿರಾಪುಂಜಿ’ ಎಂದೇ ಪ್ರಸಿದ್ಧವಾಗಿರುವ ಆಗುಂಬೆಯ ಪ್ರಾಕೃತಿಕ ಸೊಬಗನ್ನು ಕಣ್ಣು ತುಂಬಿಕೊಳ್ಳಲು ಬರುವ ಪ್ರವಾಸಿಗರಿಗೆ ಇಲಾಖೆಯ ನಿಲುವು ಇದು ಬೇಸರ ಮೂಡಿಸಿದೆ. ಅರಣ್ಯದೊಳಗಿನ ಜೋಗಿಗುಂಡಿ, ಬರ್ಕಣ, ಒನಕೆಅಬ್ಬಿ ಜಲಪಾತ, ನರಸಿಂಹ ಪರ್ವತ, ನಿಶಾನೆಗುಡ್ಡ ಸೇರಿದಂತೆ ಅನೇಕ ಸ್ಥಳಗಳನ್ನು ವೀಕ್ಷಿಸಲು ನೇರವಾಗಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಇಲಾಖೆಯ ಈ ಕ್ರಮದಿಂದ ತೊಂದರೆಯಾಗಿದೆ.

ADVERTISEMENT

2013ರಲ್ಲಿ ಆಗುಂಬೆ ಭಾಗದ 3434.72 ಹೆಕ್ಟೇರ್ ಅರಣ್ಯ ಪ್ರದೇಶ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಸೇರಿತು. ನಂತರ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಕಟ್ಟುನಿಟ್ಟಾಗಿ ಜಾರಿಯಾಗಿರಲಿಲ್ಲ.  ಪ್ರವಾಸಿ ತಾಣಗಳ ವೀಕ್ಷಣೆಗೆ ಷರತ್ತುಬದ್ಧ ಅನುಮತಿ ನೀಡಲಾಗುತಿತ್ತು. ಇದೀಗ ಈ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲಿಸುತ್ತಿರುವುದರಿಂದ ಆಗುಂಬೆ ಪ್ರವಾಸಿಗರಿಲ್ಲದೇ ಬಣಗುಡುತ್ತಿದೆ.

ಪ್ರವಾಸಿಗರಿಗೆ ಅವಕಾಶ ನೀಡಿದರೆ ಅರಣ್ಯದೊಳಗೆ ಅನ್ಯ ಚಟುವಟಿಕೆಗಳಿಗೆ ಕಾರಣವಾಗಲಿದೆ ಎಂಬ ಕಾರಣದಿಂದ  ನಿರ್ಬಂಧ ಹೇರಲಾಗಿದೆ ಎಂಬುದು ಇಲಾಖೆಯ ಅಧಿಕಾರಿಗಳ ವಾದ.

‘ಅರಣ್ಯದೊಳಗೆ ಅಪಾಯಕಾರಿ ಸ್ಥಳಗಳಿವೆ. ಪ್ರವಾಸಿಗರ ಸುರಕ್ಷತೆ ಉದ್ದೇಶದಿಂದ ಅರಣ್ಯ ಪ್ರವೇಶವನ್ನು ನಿರಾಕರಿಸಲಾಗಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ’ ಎಂದು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಡಿ.ಎಫ್‌.ಒ ಗಣೇಶ್‌ ಭಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆಗುಂಬೆಯ ವನಸಿರಿ ಕಣ್ತುಂಬಿಕೊಳ್ಳಲು ದೇಶ–ವಿದೇಶಗಳಿಂದ ಪ್ರತಿ ವರ್ಷ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿತ್ತು. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಅನೇಕ ಚಲನಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರವೂ ಆಗುಂಬೆಯನ್ನು ಪ್ರವಾಸಿ ತಾಣ ಎಂದು ಘೋಷಿಸಿದೆ.

* ಕೆಲವು ಷರತ್ತಿನ ಮೇಲೆ ವಲಯ ಅರಣ್ಯಾಧಿಕಾರಿಗಳ ಒಪ್ಪಿಗೆ ಪಡೆದು ಪ್ರವಾಸಿ ತಾಣ ವೀಕ್ಷಣೆಗೆ ಅವಕಾಶ ನೀಡಲಾಗುವುದು ‌
– ಗಣೇಶ್‌ ಭಟ್‌, ಡಿ.ಎಫ್‌.ಒ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ, ಕಾರ್ಕಳ

* ಅರಣ್ಯ ಇಲಾಖೆಯ ಕ್ರಮ ಅಕ್ಷಮ್ಯವಾದುದು. ಆಗುಂಬೆ ಸೌಂದರ್ಯ ವೀಕ್ಷಿಸಲು ಇಲಾಖೆಯು ಪ್ರವಾಸಿಗರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು.

–ಟಿ.ಕೆ.ರಮೆಶ್‌ಶೆಟ್ಟಿ, ಪ್ರವಾಸಿಗ, ತೀರ್ಥಹಳ್ಳಿ

========

– ಶಿವಾನಂದ ಕರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.