ADVERTISEMENT

ಆಟೊ ಕೊಚ್ಚಿಹೋಗಿ ತಾಯಿ–ಮಗ ಸಾವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಗುಲ್ಬರ್ಗ: ಬೀದರ್‌ ಜಿಲ್ಲೆಯ ಚಿಟಗುಪ್ಪಾ ಬಳಿ ಬುಧವಾರ ರಾತ್ರಿ ಆಟೊರಿಕ್ಷಾವೊಂದು ಹಳ್ಳದ ನೀರಿನ ಸೆಳೆತಕ್ಕೆ ಸಿಲುಕಿ ಮಗುಚಿ ತಾಯಿ, ಮಗ ಮೃತಪಟ್ಟಿದ್ದಾರೆ.

ಚಿಟಗುಪ್ಪಾ ವರದಿ: ಆಟೊ ರಿಕ್ಷಾ ದುರಂತ­ದಲ್ಲಿ ಮೃತಪಟ್ಟವರನ್ನು ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿನಿಂಗದಳ್ಳಿ ಹೇಮ್ಲಾ­ನಾಯಕ್‌ ತಾಂಡಾದ ಶೀಲಾಬಾಯಿ (35) , ಈಕೆಯ ಪುತ್ರ ದಿನೇಶ್‌ (7) ಎಂದು ಗುರುತಿಸಲಾಗಿದೆ.

ಶೀಲಾಬಾಯಿ  ಪತಿ, ಆಟೊ ಚಾಲಕ ಭೀಮರಾವ್‌ ಜಾಧವ್‌ ಹಾಗೂ ಇನ್ನಿಬ್ಬರು  ಪ್ರಯಾಣಿಕರು ಆಶ್ಚರ್ಯ­­ಕರ ರೀತಿಯಲ್ಲಿ ಪಾರಾಗಿ­ದ್ದಾರೆ. ಚಿಟಗುಪ್ಪಾದಿಂದ ಮಧ್ಯರಾತ್ರಿ ಆಟೊದಲ್ಲಿ ತಮ್ಮ ಊರಿಗೆ ತೆರಳುತ್ತಿ­ದ್ದಾಗ ಕುಡಂಬಲ್‌ ಗ್ರಾಮದ ಹತ್ತಿರದ ರಸ್ತೆಯಲ್ಲಿರುವ ಸೇತುವೆ ಮೇಲೆ ಮಳೆ ನೀರು ರಭಸವಾಗಿ ಹರಿಯುತ್ತಿತ್ತು. ಇದರ ಸೆಳೆತಕ್ಕೆ ಆಟೊ ಮಗುಚಿತು. ಶೀಲಾಬಾಯಿ ಹಾಗೂ ದಿನೇಶ್‌ ನೀರಿನಲ್ಲಿ ಕೊಚ್ಚಿಕೊಂಡು ಹೋದರು.  ಶವ­ಗಳಿಗಾಗಿ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಳಗಿನವರೆಗೂ ಹುಡುಕಾಟ ನಡೆಸಿ­ದರು. ಮುಳ್ಳು ಕಂಟಿಗೆ ಸಿಲುಕಿದ ಸ್ಥಿತಿ­ಯಲ್ಲಿ ಮೃತದೇಹಗಳು ಪತ್ತೆ­ಯಾದವು.

ರಾಯಚೂರು ವರದಿ: ನಗರಕ್ಕೆ ಸಂಪರ್ಕ ಕಲ್ಪಿಸುವ ಮನ್ಸಲಾಪುರ ರಸ್ತೆಯು ಸತತ ಮಳೆ ಮತ್ತು ಭಾರಿ ವಾಹನಗಳ ಸಂಚಾರದಿಂದ ಹದ­ಗೆಟ್ಟಿ­ದೆ. ಈ ರಸ್ತೆಯಲ್ಲಿ ಬುಧವಾರ ರಾತ್ರಿ­ಯಿಂದ ವಾಹನ ಸಂಚಾರ ಸ್ಥಗಿತ­ಗೊಂಡಿದೆ.ಇದರಿಂದ ನಗರದೊಳಗೆ ಬರುವ ಮತ್ತು ಹೊರ ಹೋಗುವ ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ. ನಗರದ ಹೊರ ವಲಯ­ದಲ್ಲಿರುವ ಬೈಪಾಸ್‌ ರಸ್ತೆಯಲ್ಲಿ 500ಕ್ಕೂ ಹೆಚ್ಚು ಸರಕು ವಾಹನಗಳು ಬುಧವಾರ ರಾತ್ರಿಯಿಂದ ಸಾಲುಗಟ್ಟಿ ನಿಂತಿವೆ.

ಬೆಳಿಗ್ಗೆ ಮನ್ಸಲಾಪುರ ರಸ್ತೆಯ ಗುಂಡಿಯಲ್ಲಿ ಸಿಕ್ಕಿ ಬಿದ್ದ ಲಾರಿಯನ್ನು ಮೇಲೆತ್ತಿ ಸಂಚಾರಕ್ಕೆ ಅನುವು ಮಾಡಿ­ಕೊಡುವಷ್ಟರಲ್ಲಿ ಮತ್ತೊಂದು ಸರಕು ಸಾಗಣೆ ವಾಹನವು ಗುಂಡಿಯಲ್ಲಿ ಸಿಕ್ಕಿಕೊಂಡಿದ್ದರಿಂದ ಸಂಚಾರ ಸ್ಥಗಿತ­ಗೊಂಡಿದೆ. ಹುಬ್ಬಳ್ಳಿ, ವಿಜಾಪುರ, ಬಾಗಲ­ಕೋಟೆ, ಮಹಾರಾಷ್ಟ್ರ, ಬಳ್ಳಾರಿ, ಕೊಪ್ಪಳ ಹೀಗೆ ಬೇರೆ ಭಾಗಗಳಿಂದ ರಾಯ­ಚೂರು ಮಾರ್ಗ­ವಾಗಿ ಹೈದರಾ­ಬಾದ್‌ಗೆ ಸರಕು ಹೊತ್ತು ಸಾಗುವ ವಾಹನ­ಗಳು ಇಲ್ಲಿಯೇ ನಿಲುಗಡೆ­ಯಾಗಿವೆ. ಇವು­ಗಳಲ್ಲಿ ಮೀನು, ತರಕಾರಿ ಸಾಗಿಸುವ ಲಾರಿಗಳು, ಹಾಲಿನ ಟ್ಯಾಂಕರ್‌­ಗಳು ಇವೆ.

ಗುರುವಾರ ಬೆಳಗಿನ ಜಾವ ಹೈದರಾ­ಬಾದ್‌ ತಲುಪ­ಬೇಕಾದ ಈ ವಾಹನ­ಗಳು ಗುರುವಾರ ಸಂಜೆ­ಯಾದರೂ ಬೈಪಾಸ್ ರಸ್ತೆಯಲ್ಲಿ ಇದ್ದವು. ‘ಬುಧವಾರ ರಾತ್ರಿ ಅನ್ನ–ನೀರು ಇಲ್ಲದೇ ಪರದಾಡಿದ್ದೆವು. ಗುರುವಾರ ಬೆಳಿಗ್ಗೆ ಬೈಪಾಸ್‌ ರಸ್ತೆಯ ಮನ್ಸಲಾ­ಪುರ ಗ್ರಾಮದ ಕೆಲ ಜನ ಚಿತ್ರಾನ್ನ, ಚಹಾ, ಒಗ್ಗರಣೆ ತಂದು ಮಾರಾಟ ಮಾಡಿದ್ದರಿಂದ ಸ್ವಲ್ಪ ಸುಧಾರಿಸಿ­ಕೊಂಡಿದ್ದೇವೆ’ ಎಂದು ಲಾರಿ ಚಾಲಕರಾದ ಕುಮಾರ, ಪರಮೇಶ ಹೇಳಿದರು. ಬೈಪಾಸ್‌ ರಸ್ತೆ ನಿರ್ಮಾಣ ಪೂರ್ಣಗೊಂಡಿದ್ದರೂ ರೈಲ್ವೆ ಸೇತುವೆ ಯನ್ನು ವಾಹನ ಸಂಚಾರಕ್ಕೆ ಮುಕ್ತ­ಗೊಳಿಸದೆ ಇರುವುದಕ್ಕೆ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿ ವರದಿ:  ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಸುರಪುರ ತಾಲ್ಲೂಕಿನಲ್ಲಿ 89 ಮನೆಗಳು ಹಾನಿಗೀಡಾಗಿವೆ.
ಯಾದಗಿರಿ ಹಾಗೂ ಶಹಾಪುರ ತಾಲ್ಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ಸುರಪುರ ತಾಲ್ಲೂಕಿನಲ್ಲಿ ಗುರುವಾರ ಹೆಚ್ಚು ಮಳೆ ಸುರಿದಿದೆ. ಸುರಪುರ ತಾಲ್ಲೂಕಿನ ಏವೂರಿನಲ್ಲಿ 4, ಕೆಂಭಾವಿಯಲ್ಲಿ 8, ಯಾಳಗಿಯಲ್ಲಿ 16 ಸೇರಿದಂತೆ ಒಟ್ಟು 89 ಮನೆಗಳು ಹಾನಿಗೀಡಾಗಿವೆ. ಕೆಂಭಾವಿ ಪಟ್ಟಣದ ಬಜಾರ್‌ನಲ್ಲಿಯೂ ನೀರು ನಿಂತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಕೆರೆಗಳಿಗೆ ಹಾನಿ: ಯಾದಗಿರಿ ತಾಲ್ಲೂಕಿನ ಬಂದಳ್ಳಿ, ವಡ್ನಳ್ಳಿ ಹಾಗೂ ಉಮ್ಲಾನಾಯಕ ತಾಂಡಾದ ಬಳಿ ಕೆರೆಗಳು ಒಡೆದಿದ್ದು, ಹೊಲ ಹಾಗೂ ಗ್ರಾಮಗಳಿಗೆ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.