ADVERTISEMENT

ಆತ್ಮವಿಲ್ಲದ ನಗರ ಬೆಂಗಳೂರು

ಹುಬ್ಬಳ್ಳಿ: ಸನ್ಮಾನ ಸಮಾರಂಭದಲ್ಲಿ ಪ್ರೊ.ಸಿ.ಎನ್‌.ಆರ್‌. ರಾವ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2014, 19:30 IST
Last Updated 15 ಫೆಬ್ರುವರಿ 2014, 19:30 IST

ಹುಬ್ಬಳ್ಳಿ: ಯುವಜನತೆ ಹಣದ ಹಿಂದೆ ಬಿದ್ದಿರುವ ಕಾರಣ ಬೆಂಗಳೂರು ಇಂದು ‘ಆತ್ಮವಿಲ್ಲದ ನಗರ’ವಾಗಿ ಬದಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಇಲ್ಲಿಂದಲೇ ವರದಿ­ಯಾಗು­ತ್ತಿವೆ ಎಂದು ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಖೇದ ವ್ಯಕ್ತಪಡಿಸಿದರು.

ಇಲ್ಲಿನ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೆ.ಎಲ್‌.ಇ ಸಂಸ್ಥೆಯಿಂದ ಶನಿವಾರ ಏರ್ಪಡಿಸಲಾಗಿದ್ದ ಸಮಾರಂಭ­ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸಂಶೋಧನಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಬೆಂಗಳೂರಿನ ಯಾವುದೇ ವಿದ್ಯಾರ್ಥಿ ನನ್ನ ಜೊತೆ ಕೆಲಸ ಮಾಡಲು ಬಂದಿಲ್ಲ. ಬದಲಿಗೆ ರಾಜ್ಯದ ಇತರೆ ಜಿಲ್ಲೆ­ಗಳಿಂದ ಬಂದಿದ್ದಾರೆ. ಕಾನ್ಪುರ ಐಐಟಿ­ಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪದವಿ ಪಡೆದವರೂ ಹಣದ ಹಿಂದೆ ಬಿದ್ದು ಇಲ್ಲಿ ಸೋಪು ಮಾರುತ್ತಿದ್ದಾರೆ. ಕೇವಲ ಹಣ ಗಳಿಕೆಯೊಂದೇ ದಾರಿ, ಬೇರೆಯದ್ದಕ್ಕೆ ಸಮಯ ಇಲ್ಲ ಎಂದು ಇಲ್ಲಿನ ಯುವ­ಜನತೆ ಭಾವಿಸಿರುವಂತಿದೆ’ ಎಂದು  ಸಾತ್ವಿಕ ಕೋಪ ಪ್ರದರ್ಶಿಸಿದರು.

‘ಜಾಗತಿಕಮಟ್ಟದಲ್ಲಿ ಅಭಿವೃದ್ಧಿ ಎಂದರೆ ಕೇವಲ ಐ.ಟಿ ಕ್ಷೇತ್ರವಲ್ಲ. ಇಂದು ವಿದೇಶಿ ಕಂಪೆನಿಗಳನ್ನು ಶ್ರೀಮಂತವಾಗಿ ಸುವ ಕೆಲಸವನ್ನು ನಮ್ಮ ಪ್ರತಿಭಾವಂತ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಅಗತ್ಯ ಸವಲತ್ತು ಕಲ್ಪಿಸಿ ಅವರನ್ನೇ ಬಂಡವಾಳ ಹೂಡಿಕೆದಾರರನ್ನಾಗಿ ರೂಪಿಸುವ ಕೆಲಸ ನಮ್ಮಲ್ಲಿ ಆಗಬೇಕಿದೆ’ ಎಂದರು.

‘ಶಾಲಾ–ಕಾಲೇಜು ಮಟ್ಟದಲ್ಲಿಯೇ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಪ್ರೀತಿ ಬೆಳೆ­ಸುವ ಕೆಲಸ ಮಾಡಬೇಕಿದೆ. ಬೆಂಗಳೂರು ದೇಶದ ವಿಜ್ಞಾನ ರಾಜಧಾನಿಯಾಗಿದೆ ಎಂಬ ಹೆಮ್ಮೆಯ ವಿಚಾರವನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ­ಯಾಗಿ­ದ್ದಾಗ ಸರ್‌ ಎಂ.ವಿಶ್ವೇಶ್ವರಯ್ಯ ಅವರ ನೆನಪಿಗೆ ಚಿಕ್ಕಬಳ್ಳಾಪುರದಲ್ಲಿ ಜಾಗತಿಕ ಮಟ್ಟದ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಆರಂಭಿಸಲು ಮುಂದಾಗಿದ್ದರು. ದುರದೃಷ್ಟವಶಾತ್‌ ಅವರು ಅಧಿಕಾರ­ದಿಂದ ಕೆಳಗೆ ಇಳಿಯುತ್ತಲೇ ಅದು ಹೆಚ್ಚಿನ ಪ್ರಗತಿ ಕಾಣಲಿಲ್ಲ’ ಎಂದು ಅವರು ಹೇಳಿದರು.

ರಾವ್‌ ಸರ್‌ ಕ್ಲಾಸ್...
ಕರ್ನಾಟಕದ ವಿಚಾರ ಬಂದಾಗ­ಲೆಲ್ಲಾ ಕನ್ನಡದಲ್ಲಿಯೇ ಮಾತನಾ­ಡುತ್ತಾ, ಆಗಾಗ ಹಾಸ್ಯ ಚಟಾಕಿ ಹಾರಿಸುತ್ತಾ ಪ್ರೊ.ರಾವ್‌, ಅರ್ಧ ಗಂಟೆ ಕಾಲ ವಿದ್ಯಾರ್ಥಿಗಳಿಗೆ ವಿಜ್ಞಾನದ ಪಾಠ ಹೇಳಿದರು.

ಮಾತಿನ ಮಧ್ಯೆ ಸಭಾಂಗಣದಲ್ಲಿ ಮೊಬೈಲ್‌ ರಿಂಗಣಿಸಿದಾಗ ಹಾಗೂ ಕ್ಯಾಮೆರಾಗಳ ಫ್ಲ್ಯಾಶ್‌ ಬೆಳಕು ಬಿದ್ದಾಗ ತುಸು ಕೋಪ ಪ್ರದರ್ಶಿಸಿದ ರಾವ್, ‘ಬೆಂಗಳೂರಿನ ಜವಾಹರ­ಲಾಲ್‌ ನೆಹರೂ ವೈಜ್ಞಾನಿಕ ಸಂಶೋ­ಧ­ನೆಗಳ ಉನ್ನತ ಅಧ್ಯಯನ ಕೇಂದ್ರದ ತರಗತಿಯಲ್ಲಿ ನಾನು ಪಾಠ ಮಾಡು­ವಾಗ ಸದ್ದು ಮಾಡಿದರೆ, ಸಂಬಂಧಿ­ಸಿದ ವಿದ್ಯಾರ್ಥಿಗೆ ಗುರಿ ಇಟ್ಟು ಚಾಕ್‌­ಪೀಸ್‌ ಎಸೆಯುತ್ತಿದ್ದೆ’ ಎಂದು ನೆನಪಿಸಿಕೊಂಡರು.

‘ವಿಶ್ವದಲ್ಲಿಯೇ ಅತ್ಯಂತ ಸಂತೋ­ಷ­ದ ವ್ಯಕ್ತಿ ನಾನಾಗಿದ್ದೇನೆ. ಹಣದ ಬೆನ್ನು ಬೀಳದ ಕಾರಣ ಈ ಸಂತೃಪ್ತ ಬದುಕು ಸಾಧ್ಯವಾಗಿದೆ. ಇಲ್ಲಿಯವ­ರೆಗೆ ನಗದು ಪುರಸ್ಕಾರದ ರೂಪದಲ್ಲಿ ಬಂದ ಹಣವನ್ನು ಮಕ್ಕಳಲ್ಲಿ ವಿಜ್ಞಾ­ನದ ಆಸಕ್ತಿ ಬೆಳೆಸುತ್ತಿರುವ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT