ADVERTISEMENT

‘ಆದಿ ಜಾಂಬವ ಅಭಿವೃದ್ಧಿ ನಿಗಮ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST

ಬೆಂಗಳೂರು: ಮಾದಿಗ ಸಮುದಾಯಕ್ಕೆ ಸವಲತ್ತುಗಳನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗುವ ನಿಗಮಕ್ಕೆ ‘ಆದಿ ಜಾಂಬವ ಅಭಿವೃದ್ಧಿ ನಿಗಮ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಈ ಸಮುದಾಯಕ್ಕೆ ಬಾಬು ಜಗಜೀವನ್‌ ರಾಮ್‌ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಲು ಅನುಮೋದನೆ ಸಿಕ್ಕಿತ್ತು. ಆದರೆ, ಈ ಹೆಸರಿನಲ್ಲಿ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಇದೆ. ಗೊಂದಲ ಪರಿಹರಿಸುವ ಉದ್ದೇಶದಿಂದ ಹೆಸರು ಬದಲಿಸಲಾಗಿದೆ ಎಂದು ಸಚಿವರು  ಮಾಧ್ಯಮಗೋಷ್ಠಿಯಲ್ಲಿ
ಮಂಗಳವಾರ ವಿವರಿಸಿದರು.

‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟ ಜಾತಿಯಲ್ಲಿರುವ ಎಡಗೈ ಬಣಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಇದೀಗ ರಾಜ್ಯಸಭೆ ಸ್ಥಾನವನ್ನೂ ಪಕ್ಷ ನೀಡಿದೆ. ಈ ಸಮುದಾಯದವರ ಏಳಿಗೆಗಾಗಿ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಹೊಸ ನಿಗಮಕ್ಕೆ ಮಂಜೂರಾಗುವ ಅನುದಾನವನ್ನು ಈ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿ ಬಳಕೆ ಮಾಡಲಾಗುವುದು ಎಂದರು.

ADVERTISEMENT

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮಾದಿಗ ಸಮುದಾಯವನ್ನು ಓಲೈಸಲು ನಿಗಮ ಸ್ಥಾಪನೆ ಮಾಡುತ್ತಿಲ್ಲ. ತೀರಾ ಹಿಂದುಳಿದಿರುವ ಸಮುದಾಯ ಜನರು ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಸಾಮಾಜಿಕ ನ್ಯಾಯದಡಿ ಸೌಲಭ್ಯಗಳನ್ನು ತಕ್ಷಣ ತಲುಪಿಸಬೇಕು ಎಂಬ ಸದುದ್ದೇಶದಿಂದ ನಿಗಮ ಸ್ಥಾಪಿಸಲಾಗಿದೆ’ ಎಂದು ಸಮರ್ಥನೆ ನೀಡಿದರು.

ಪರಿಶಿಷ್ಟ ಸಮುದಾಯದವರಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿದ ವರದಿಯನ್ನು ಕೇಂದ್ರಕ್ಕೆ ಕಳುಹಿಸುವ ಕುರಿತು ಸಂಪುಟ ಉಪ ಸಮಿತಿ ವರದಿ ನೀಡಿದ ಬಳಿಕ ಸಂಪುಟ ಸಭೆ ತೀರ್ಮಾನ ತೆಗೆದುಕೊಳ್ಳಲಿದೆ. ಹಿಂದುಳಿದ ವರ್ಗಗಳ ಆಯೋಗ ಜಾತಿ ಸಮೀಕ್ಷೆ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿಯನ್ನು ಇನ್ನೂ ಸರ್ಕಾರಕ್ಕೆ ಸಲ್ಲಿಸಿಲ್ಲ ಎಂದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿ ಹಾಸ್ಟೆಲ್‌ಗಳ ವ್ಯವಸ್ಥೆ ಸುಧಾರಣೆ ಕಂಡಿದೆ. ಈ ಹಾಸ್ಟೆಲ್‌ಗಳು ದುಸ್ಥಿತಿಯಲ್ಲಿವೆ ಎಂದು ಬಿಜೆಪಿ ನಾಯಕ ಡಿ.ವಿ ಸದಾನಂದ ಗೌಡ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತ ಎಂದು ಆಂಜನೇಯ ದೂರಿದರು.

‘ಸೌಲಭ್ಯಗಳಿಲ್ಲ ಎಂದು ಆರೋಪಿಸಿ ಈ ಹಾಸ್ಟೆಲ್‌ಗಳಲ್ಲಿದ್ದ ವಿದ್ಯಾರ್ಥಿಗಳು ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆದರೆ, ನಮ್ಮ ನಾಲ್ಕೂವರೆ ವರ್ಷಗಳ ಆಡಳಿತ ಅವಧಿಯಲ್ಲಿ ಅಂಥ ಯಾವುದೇ ಘಟನೆ ನಡೆದಿಲ್ಲ. ಹಾಸ್ಟೆಲ್‌ಗಳಲ್ಲಿರುವ ಪ್ರತಿ ವಿದ್ಯಾರ್ಥಿಯ ವೆಚ್ಚಕ್ಕೆ ಬಿಜೆಪಿ ಅವಧಿಯಲ್ಲಿ ತಿಂಗಳಿಗೆ ತಲಾ ₹ 950ರಂತೆ ನೀಡಲಾಗುತ್ತಿತ್ತು. ನಾವು ಆ ಮೊತ್ತವನ್ನು ₹ 1,500ಕ್ಕೆ ಹೆಚ್ಚಿಸಿದ್ದೇವೆ’ ಎಂದರು.

‘ಹೋಬಳಿಗೆ ಒಂದರಂತೆ 818 ವಸತಿ ಶಾಲೆಗಳನ್ನು ಕಾಂಗ್ರೆಸ್‌ ಸರ್ಕಾರ ಸ್ಥಾಪಿಸಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟದ ಹೈಟೆಕ್‌ ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.