ADVERTISEMENT

ಆಧುನಿಕ ಹಿಂದಿ ಕಾವ್ಯ: 15 ರಿಂದ ಅಂತರರಾಷ್ಟ್ರೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಹುಬ್ಬಳ್ಳಿ: ನಗರದ ಶ್ರೀ ಕಾಡಸಿದ್ದೇಶ್ವರ ಕಲಾ ಕಾಲೇಜು ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆ, ಆಗ್ರಾದ ಕೇಂದ್ರೀಯ ಹಿಂದಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ 60ರ ನಂತರದ ಹಿಂದಿ ಕಾವ್ಯದ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಇದೇ 15 ಹಾಗೂ 16ರಂದು ನಡೆಯಲಿದೆ.

ವಿದ್ಯಾನಗರದ ಬಿವಿಬಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ವಿಚಾರಸಂಕಿರಣದಲ್ಲಿ ಆರು ರಾಷ್ಟ್ರಗಳ ಪ್ರತಿನಿಧಿಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಎಸ್.ಐ. ಮುನವಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲೇಖಕ ಹಾಗೂ ಚಿಂತಕ ರಾಜಸ್ತಾನದ ಡಾ. ಓಂ. ಆನಂದ ಸರಸ್ವತಿ ಅವರ ಸಾನ್ನಿಧ್ಯ ಹಾಗೂ ಕೆ.ಎಲ್.ಇ. ಸೊಸೈಟಿಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಅಧ್ಯಕ್ಷತೆಯಲ್ಲಿ 15ರಂದು ಬೆಳಿಗ್ಗೆ ನಡೆಯಲಿರುವ ಸಮಾರಂಭದಲ್ಲಿ ಹಿರಿಯ ಲೇಖಕ ಡಾ. ಅಮರ್ ಸಿಂಗ್ ವಧಾನ್ ವಿಚಾರ ಸಂಕಿರಣ ಉದ್ಘಾಟಿಸುವರು. ಬನಾರಸ್ ಹಿಂದಿ ವಿವಿಯ ಹಿಂದಿ ವಿಭಾಗದ ಡಾ. ವಿನಯ ಕುಮಾರ್ ಸಿಂಗ್, ಹೈದರಾಬಾದ್‌ನ ಡಾ. ತೇಜಸ್ವಿ ಕಟ್ಟಿಮನಿ, ಧಾರವಾಡ ವಿವಿಯ ಡಾ. ಎಂ. ಧವನ್, ಬೆಳಗಾವಿಯ ಡಾ.ವಿ.ಎಸ್. ಸಾಧುನವರ ಮುಂತಾದವರು ಅತಿಥಿಗಳಾಗಿರುವರು.16ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಧಾರವಾಡ ವಿವಿಯ ಹಿಂದಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಚಂದುಲಾಲ್ ದುಬೆ ಅಧ್ಯಕ್ಷತೆ ವಹಿಸುವರು. ಬಹುಭಾಷಾ ತಜ್ಞ ಡಾ. ಪಂಚಾಕ್ಷರಿ ಹಿರೇಮಠ, ನಿವೃತ್ತ ಪ್ರಾಂಶುಪಾಲ ಡಾ.ವಿ.ವಿ. ಹೆಬ್ಬಳ್ಳಿ, ಧಾರವಾಡ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಆರ್.ಭಟ್ ಮುಂತಾದವರು ಅತಿಥಿಗಳಾಗಿರುವರು. ಒಟ್ಟು ಎಂಟು ಗೋಷ್ಠಿಗಳಲ್ಲಿ 180 ಮಂದಿ ವಿಷಯ ಮಂಡನೆ ಮಾಡುವರು.15ರಂದು ಸಂಜೆ ಕವಿಗೋಷ್ಠಿ ಕೂಡ ನಡೆಯಲಿದೆ ಎಂದು ಅವರು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.