ADVERTISEMENT

ಆನೆ ಕಳೇಬರ ಪತ್ತೆ: ಗುಂಡೇಟು ಶಂಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST
ಆನೆ ಕಳೇಬರ ಪತ್ತೆ: ಗುಂಡೇಟು ಶಂಕೆ
ಆನೆ ಕಳೇಬರ ಪತ್ತೆ: ಗುಂಡೇಟು ಶಂಕೆ   

ಸಕಲೇಶಪುರ: ತಾಲ್ಲೂಕಿನ ಪಶ್ಚಿಮಘಟ್ಟದ ಬಿಸಿಲೆ ರಕ್ಷಿತ ಅರಣ್ಯ ಸಮೀಪದ ಹಡ್ಲುಗದ್ದೆ ಎಂಬಲ್ಲಿ ಭಾರೀ ಗಾತ್ರದ ಗಂಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆಮಂಗಳವಾರ ಬೆಳಕಿಗೆ ಬಂದಿದೆ.

ದಂತವನ್ನು ಕಳೆದುಕೊಂಡಿರುವ ಆನೆ ಸುಮಾರು 3 ತಿಂಗಳ ಹಿಂದೆಯೇ ಗುಂಡೇಟಿನಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡ ತೀವ್ರ ತನಿಖೆಯಲ್ಲಿ ತೊಡಗಿದೆ. ಗ್ರಾಮದ ಹಳ್ಳದಲ್ಲಿ ಪತ್ತೆಯಾಗಿರುವ ಆನೆಯ ಮೃತ ದೇಹದಲ್ಲಿ ಮೂಳೆಗಳು ಮಾತ್ರ ಪತ್ತೆಯಾಗಿದ್ದು, ಮಾಂಸದ ಅಂಶ ಸಂಪೂರ್ಣ ಕೊಳೆತು ಹೋಗಿದೆ.

ಸುಮಾರು ಒಂದೂವರೆ ಕಿ.ಮೀ. ದೂರದ ವರೆಗೂ ಆನೆಯ ಮೂಳೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಕಾಡಾನೆಯ ಕಳೆಬರ ಸೋಮವಾರ ಸಂಜೆ ಪತ್ತೆ ಆದ ತಕ್ಷಣ ಯಸಳೂರು ಅರಣ್ಯ ಇಲಾಖೆ ಸಿಬ್ಬಂದಿ ತರಾತುರಿಯಲ್ಲಿ ಸುಟ್ಟು ಹಾಕುವ ಪ್ರಕ್ರಿಯೆಗೆ ಮುಂದಾಗಿದ್ದರು ಎನ್ನಲಾಗಿದ್ದು, ಸ್ಥಳೀಯರು ಹಾಗೂ ಕೆಲವು ಪರಿಸರವಾದಿಗಳು ಅವರ ಪ್ರಯತ್ನವನ್ನು ತಡೆದು ಮರಣೋತ್ತರ ಪರೀಕ್ಷೆ ನಡೆಯಬೇಕು.

ಆನೆಯ ಸಾವು ಹೇಗಾಯಿತು ಎಂಬ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಯಸಳೂರು ವಲಯ ಅರಣ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಯನ್ನು ದಂತಕ್ಕಾಗಿಯೇ ಗುಂಡು ಹಾರಿಸಿ ಕೊಂದು ಹಾಕಿರಬಹುದು ಎಂಬ ಅನುಮಾನ ಅರಣ್ಯ ಇಲಾಖೆಯಿಂದಲೂ ಸಹ ವ್ಯಕ್ತವಾಗಿದೆ. ಗ್ರಾಮಸ್ಥರು, ಪರಿಸರವಾದಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ಇಡೀ ದಿನ  ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಸುಟ್ಟು ಹಾಕಲಾಯಿತು.

ಡಿಎಫ್‌ಓ ಹೇಳಿಕೆ: ಹಡ್ಲುಗದ್ದೆಯಲ್ಲಿ ಪತ್ತೆಯಾಗಿರುವ ಕಾಡಾನೆ ಅವಶೇಷಗಳನ್ನು ಗಮನಿಸಿದರೆ ಸುಮಾರು 3 ತಿಂಗಳ ಹಿಂದೆಯೇ ಆನೆ ಮೃತಪಟ್ಟಿರುವ ಸಾಧ್ಯತೆ ಇದೆ. ಸ್ಥಳದಲ್ಲಿ ಅದರ ಕೋರೆಗಳು ಇಲ್ಲದೆ ಇರುವುದನ್ನು ಗಮನಿಸಿದರೆ ದಂತಗಳಿಗಾಗಿಯೇ ಆನೆಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಆ ಭಾಗದ ಬಂದೂಕುಗಳನ್ನು ಇಲಾಖೆಯ ವಶಕ್ಕೆ ತೆಗೆದುಕೊಂಡು ತೀವ್ರ ತನಿಖೆ ನಡೆಸಲು ಇಲಾಖೆ ಮುಂದಾಗಿದೆ. ಕಳೆದ ವರ್ಷ ಕಾಟಿಯೊಂದನ್ನು ಕೊಂದು ಅದರ ಮಾಂಸವನ್ನು ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದರೂ, ಸಾಕ್ಷಿಗಳ ಕೊರತೆಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವುದು ಖಚಿತ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.