
ಶಿರಸಿ: ಮಾನವ ಮತ್ತು ಆನೆ ಸಂಘರ್ಷ ನಿಯಂತ್ರಿಸುವ ನಿಟ್ಟಿನಲ್ಲಿ ಯಲ್ಲಾಪುರ ವಿಭಾಗದ ಮಂಚಿಕೇರಿ ಅರಣ್ಯ ವಲಯದಲ್ಲಿ ಅನುಷ್ಠಾನಗೊಳಿಸಿರುವ ರಾಜ್ಯದ ಮೊದಲ ‘ಜೇನು ಬೇಲಿ’ ಪ್ರಯೋಗ ಯಶಸ್ಸು ಕಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ, ಹಳಿಯಾಳ, ಶಿರಸಿ ತಾಲ್ಲೂಕುಗಳಲ್ಲಿ ಕೃಷಿ ಬೆಳೆಗಳ ಮೇಲೆ ಆನೆ ಹಿಂಡಿನ ದಾಳಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದನ್ನು ತಪ್ಪಿಸಲು ಯಲ್ಲಾಪುರ ಅರಣ್ಯ ವಿಭಾಗವು ಮಹಾರಾಷ್ಟ್ರದ ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣಾ ಸೊಸೈಟಿ ಸಹಕಾರದಲ್ಲಿ 2017–18ನೇ ಸಾಲಿನಲ್ಲಿ ಮಂಚಿಕೇರಿ ವಲಯದಲ್ಲಿ ಪೈಲೆಟ್ ಯೋಜನೆಯನ್ನು ಅನುಷ್ಠಾನಗೊಳಿಸಿತು. ಈ ಯೋಜನೆ ಇಲಾಖೆಗೆ ಉತ್ತಮ ಫಲ ನೀಡಿದೆ.
‘ಮೊದಲು ಆನೆಗಳನ್ನು ಓಡಿಸಲು ಮೆಣಸಿನಕಾಯಿ ಹೊಗೆ, ಖಾರಪುಡಿ, ಪಟಾಕಿ ಬಳಸುತ್ತಿದ್ದೆವು. ಪಟಾಕಿ ಸದ್ದಿಗೆ ಆನೆಗಳು ಇನ್ನಷ್ಟು ಆಕ್ರಮಣಕಾರಿಯಾಗುವುದರಿಂದ ಇದರ ಬಳಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. ಆಮೇಲೆ ಆನೆ ಕಾರಿಡಾರ್‌ನಲ್ಲಿ ‘ಎಲಿಫೆಂಟ್ ಟ್ರೂಫ್ ಟ್ರೆಂಚ್’ ನಿರ್ಮಾಣ ಮಾಡಿದೆವು. ಆನೆಗಳು ಸುಲಭವಾಗಿ ಈ ಅಗಳದಲ್ಲಿ ಇಳಿದು, ಮರಿಗಳನ್ನು ಮೇಲಕ್ಕೆ ಹತ್ತಿಸಿಕೊಂಡು ಬರಲಾರಂಭಿಸಿದ್ದರಿಂದ ಈ ಪ್ರಯೋಗ ವಿಫಲವಾಯಿತು. ನೈಸರ್ಗಿಕ ವಿಧಾನದಿಂದಲೇ ಆನೆಗಳ ಓಡಾಟದ ದಿಕ್ಕನ್ನು ಬದಲಿಸಬೇಕೆಂದು ಯೋಚಿಸಿದಾಗ ಹೊಳೆದಿದ್ದು ಪರಿಸರ ಸ್ನೇಹಿ ಜೇನು ಬೇಲಿ’ ಎನ್ನುತ್ತಾರೆ ಮಂಚಿಕೇರಿ ಎಸಿಎಫ್ ಪ್ರಶಾಂತ ಪಿ.ಕೆ.ಎಂ.
‘ಈ ಯೋಜನೆಯು ರಾಷ್ಟ್ರ ಮಟ್ಟದಲ್ಲಿ ‘ಉತ್ತರ ಕನ್ನಡ ಮಾದರಿ’ ಎಂದೇ ಪ್ರಚಲಿತವಾಗಿದೆ. ಪ್ರಾಯೋಗಿಕ ಹಂತವಾಗಿದ್ದರಿಂದ 5–6 ಕಿ.ಮೀ ದೂರದವರೆಗಷ್ಟೇ ಇದನ್ನು ಅಳವಡಿಸಲಾಗಿದೆ’ ಎನ್ನುತ್ತಾರೆ ಯಲ್ಲಾಪುರ ಡಿಸಿಎಫ್ ಆರ್.ಜಿ.ಭಟ್ಟ
ಏನಿದು ಜೇನು ಬೇಲಿ?
‘ಮರದ ಬೊಡ್ಡೆ (ಬುಡಚಿ)ಯನ್ನು ಸಂಗ್ರಹಿಸಿ, ಅದರ ಒಳಗಿನ ಪೊಳ್ಳು ಭಾಗದಲ್ಲಿ, ಬೆಲ್ಲ, ಘಮದ ಚಕ್ಕೆ (ಅಡುಗೆಗೆ ಬಳಸುವ), ನಿರುಪಯುಕ್ತ ಜೇನುರಟ್ಟನ್ನು ಇಟ್ಟರೆ 10 ದಿನಗಳ ಒಳಗೆ ಇದರೊಳಗೆ ಜೇನು ಸೇರಿಕೊಳ್ಳುತ್ತದೆ. ರೈತರ ಜಮೀನಿನ ಗುಂಟ 100ರಿಂದ 200 ಮೀಟರ್ ಅಂತರದಲ್ಲಿ ಇಂತಹ ಬೊಡ್ಡೆಗಳನ್ನು ಕಟ್ಟಲಾಗಿದೆ. ಮರಗಳ ಹೆಣೆ ಅಥವಾ ಎರಡು ಕಂಬಗಳ ನಡುವೆ ಇಂತಹ ಹಲವಾರು ಬೊಡ್ಡೆಗಳು ಇವೆ. ಜೇನು ಪಡೆ ಸಂಚಾರ, ಅವುಗಳ ಸದ್ದಿಗೆ ಹೆದರುವ ಆನೆಗಳು ಈ ಮಾರ್ಗದಲ್ಲಿ ಓಡಾಡುವುದು ಕಡಿಮೆಯಾಗಿದೆ. ಕಳೆದ ವರ್ಷ ಬೆಳೆ ಹಾನಿ ಪ್ರಮಾಣ ಕೂಡ ಕಡಿಮೆಯಾಗಿದೆ’ ಎಂದು ಪ್ರಶಾಂತ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.