ADVERTISEMENT

ಆನೆ ಸಾವಿಗೆ ಕಾರಣರಾದವರು ಶಿಕ್ಷಾರ್ಹರು: ಅಧಿಕಾರಿಗಳಿಗೆ ಹೈಕೋರ್ಟ್ ಬುಲಾವ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಬೆಂಗಳೂರು: ಆನೆಗಳು ಸಾವನ್ನಪ್ಪದಂತೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ಮೇಲೆಯೂ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ವಿದ್ಯುತ್ ಸ್ಪರ್ಶದಿಂದ ಮಂಗಳವಾರ ಆನೆ ಸತ್ತಿರುವುದು ಈಗ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.

ಕಾರಣ, ನಿಯಮಾನುಸಾರ ವಿದ್ಯುತ್ ತಂತಿ ಅಳವಡಿಸಲು ವಿಫಲವಾದ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂದಿರುವ ಹೈಕೋರ್ಟ್, ಇವರು ಶಿಕ್ಷೆಗೆ ಅರ್ಹರು ಎಂದಿದೆ.

ಈ ಕಾರಣದಿಂದ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇಂಧನ ಇಲಾಖೆಯ ಕಾರ್ಯದರ್ಶಿ ಅವರಿಗೆ ನೋಟಿಸ್ ಜಾರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ. ಮುಂದಿನ ವಿಚಾರಣೆ ವೇಳೆ ಇವರಿಬ್ಬರೂ ಹಾಜರು ಇರುವಂತೆ ಪೀಠ ತಿಳಿಸಿದೆ.

ADVERTISEMENT

ಆನೆಗಳ ಸಾವಿನ ಕುರಿತು 2008ರಲ್ಲಿ ಹೈಕೋರ್ಟ್ ಖುದ್ದು ದಾಖಲು ಮಾಡಿಕೊಂಡಿರುವ ಮೊಕದ್ದಮೆಯ ವಿಚಾರಣೆಯನ್ನು ಈ ಪೀಠ ನಡೆಸುತ್ತಿದೆ. ಮತ್ತೊಂದು ಆನೆಯ ಸಾವಿನ ವಿಷಯ ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಿಗೆ ತಿಳಿದು ಅಸಮಾಧಾನಗೊಂಡರು.

`ನಿಯಮದ ಪ್ರಕಾರ ವಿದ್ಯುತ್ ತಂತಿಗಳು ನೆಲದಿಂದ 20 ಅಡಿ ಮೇಲೆ ಇರಬೇಕು. ಆನೆ ಸತ್ತಿರುವುದು ನೋಡಿದರೆ ತಂತಿಯನ್ನು ಕೆಳಕ್ಕೆ ಅಳವಡಿಸಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಇದು ಕರ್ತವ್ಯಲೋಪವನ್ನು ಎದ್ದು ತೋರಿಸುತ್ತದೆ~ ಎಂದು ಆದೇಶದಲ್ಲಿ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.

ಆನೆಗಳಿಂದ ಮನುಷ್ಯನಿಗೆ ತೊಂದರೆ ಹಾಗೂ ಮನುಷ್ಯನಿಂದ ಆನೆಗಳಿಗೆ ತೊಂದರೆ ಆಗದಂತೆ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ವರದಿ ನೀಡಲು ಕೋರ್ಟ್‌ನಿಂದ ರಚನೆಗೊಂಡಿದ್ದ ಸಮಿತಿಯ ಸದಸ್ಯರೆಲ್ಲ ಇದೇ ವೇಳೆ ವರದಿಯನ್ನು ಕೋರ್ಟ್ ಮುಂದಿಟ್ಟರು. ಈ ವರದಿಯನ್ನು ಪರಿಶೀಲಿಸಿ ಸಮಗ್ರ ವರದಿಯನ್ನು 15 ದಿನಗಳ ಒಳಗೆ ನೀಡುವಂತೆ ಸಮಿತಿಯ ಅಧ್ಯಕ್ಷರಿಗೆ ನ್ಯಾಯಮೂರ್ತಿಗಳು ಸೂಚಿಸಿದರು. ವಿಚಾರಣೆಯನ್ನು ಸೆ.6ಕ್ಕೆ ಮುಂದೂಡಲಾಗಿದೆ.

`ಆಲೂರಿನಲ್ಲಿ ಹಲಸಿನ ಹಣ್ಣಿನ ಆಸೆಗೆ ಬಂದ ಆನೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ. ಈ ಆನೆ ಸುಮಾರು 20 ರಿಂದ 22 ವರ್ಷ ವಯಸ್ಸಿನದ್ದು. ಈ ಭಾಗದಲ್ಲಿ ಹಲವು ದಿನಗಳಿಂದ ಸುತ್ತಾಡುತ್ತಿದ್ದ ಆರು ಆನೆಗಳ ಹಿಂಡಿನ ಸದಸ್ಯನಾಗಿತ್ತು. ಗುಡ್ಡದ ಮೇಲೊಂದು ಮತ್ತು ಕೆಳಗೊಂದು ಕಂಬ ನೆಟ್ಟು ತಂತಿ ಅಳವಡಿಸಲಾಗಿದೆ.

ತಂತಿಗಳು ಆನೆಯ ಸೊಂಡಿಲಿಗೆ ನಿಲುಕಬಹುದಾದಷ್ಟು (ಸುಮಾರು 16 ಅಡಿ ಎತ್ತರ) ಕೆಳಗಿದ್ದವು. ಈ ಎರಡು ಕಂಬಗಳ ಮಧ್ಯದಲ್ಲಿ ಇನ್ನೂ ಒಂದೆರಡು ಕಂಬಗಳನ್ನು ನೆಟ್ಟಿದ್ದರೆ ಈ ಅಪಘಾತವನ್ನು ತಡೆಯಬಹುದಾಗಿತ್ತು~ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ.

ಹಾಸನ ಜಿಲ್ಲೆಯೊಂದರಲ್ಲಿಯೇ ಹತ್ತು ವರ್ಷಗಳಲ್ಲಿ ಒಟ್ಟು 18 ಆನೆಗಳು ಪ್ರಾಣ ಬಿಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.