ADVERTISEMENT

ಆರೋಪಿ ಮೊಹಮದ್‌ ಅಯೂಬ್‌ಗೆ ಹೈಕೋರ್ಟ್ ಕ್ಷಮಾದಾನ

ಮೈಸೂರು ಕೋರ್ಟ್‌ ಆವರಣದಲ್ಲಿ ಬಾಂಬ್‌ ಸ್ಫೋಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:00 IST
Last Updated 7 ಡಿಸೆಂಬರ್ 2018, 19:00 IST

ಬೆಂಗಳೂರು: ಮೈಸೂರು ಕೋರ್ಟ್‌ ಆವರಣದ ಸಾರ್ವಜನಿಕ ಶೌಚಾಲಯದಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಮೊಹಮದ್‌ ಅಯೂಬ್‌, ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಒಪ್ಪಿರುವ (ಅಪ್ರೂವರ್‌) ಕಾರಣ ಹೈಕೋರ್ಟ್‌ ಆತನಿಗೆ ಆರೋಪಿ ಸ್ಥಾನದಿಂದ ಹೊರಗುಳಿಯಲು ಕ್ಷಮಾದಾನ ನೀಡಿದೆ.

ಈ ಮೊದಲು ಕ್ಷಮಾದಾನ ಕೋರಿ ಅಯೂಬ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಎನ್‌ಐಎ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಹಾಗೂ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಶುಕ್ರವಾರ ಈ ಮೇಲ್ಮನವಿ ಪುರಸ್ಕರಿಸಿದೆ.

ADVERTISEMENT

ಎನ್‌ಐಎ ಪರ ವಾದ ಮಂಡಿಸಿದ ಪಿ.ಪ್ರಸನ್ನ ಕುಮಾರ್, ‘ಪ್ರಕರಣದ ಇತರ ಆರೋಪಿಗಳು ನನ್ನ ಮನೆಯಲ್ಲಿ ಬಾಂಬ್ ತಯಾರಿಸಿದ್ದರು ಎಂಬುದನ್ನು ಮೊಹಮದ್ ಅಯೂಬ್‌ ಒಪ್ಪಿಕೊಂಡಿದ್ದಾನೆ. ಅಂತೆಯೇ, ಮೈಸೂರು ಕೋರ್ಟ್‌ನಲ್ಲಿ ಬಾಂಬ್‌ ಸ್ಫೋಟಗೊಂಡ ನಂತರ ಬೇಸ್‌ ಮೂವ್‌ಮೆಂಟ್‌ ಘಟನೆಯ ಹೊಣೆ ಹೊತ್ತುಕೊಂಡಿದೆ ಎಂಬುದನ್ನು ಈತ ತನ್ನ ಮೊಬೈಲ್‌ ಫೋನ್‌ನಿಂದ ಬಹಿರಂಗಪಡಿಸಿದ್ದಾನೆ’ ಎಂದರು.

‘ಈ ಅಂಶಗಳು ಪ್ರಕರಣದ ಪ್ರಮುಖ ಸತ್ಯ ಸಂಗತಿಗಳಾಗುತ್ತವೆ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಇದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಾಗಿ ಆತ ಹೇಳಿರುವ ಕಾರಣ ಕ್ಷಮಾದಾನ ನೀಡಬೇಕು. ಒಂದು ವೇಳೆ ಪ್ರತಿಕೂಲ ಹೇಳಿಕೆ ನೀಡಿದರೆ ಆತನನ್ನು ಮತ್ತೆ ಆರೋಪಿ ಸ್ಥಾನದಲ್ಲಿ ಇರಿಸಿ ವಿಚಾರಣೆ ನಡೆಸಬಹುದು’ ಎಂದು ಕೋರಿದರು.

‘ಮೊಹಮದ್‌ ಅಯೂಬ್‌ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿಲ್ಲ ಮತ್ತು ಆತ ದಕ್ಷಿಣ ಭಾರತದ ಹಲವೆಡೆ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣಗಳಲ್ಲೂ ಆರೋಪಿ ಸ್ಥಾನದಲ್ಲಿರುವ ಕಾರಣ ಕ್ಷಮಾದಾನ ನೀಡಲು ಸಾಧ್ಯವಿಲ್ಲ’ ಎಂದು ವಿಚಾರಣಾ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಮೊಹಮದ್‌ ಅಯೂಬ್‌ ತಮಿಳುನಾಡಿನ ಮದುರೆ ನಿವಾಸಿ.

ಪ್ರಕರಣವೇನು? : 2016ರ ಆಗಸ್ಟ್ 1ರಂದು ಮೈಸೂರು ಕೋರ್ಟ್‌ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. ಈ ಕುರಿತು ಲಕ್ಷ್ಮೀಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆ. 20ರಂದು ಪ್ರಕರಣದ ತನಿಖೆ ಕೈಗೆತ್ತಿಕೊಂಡ ಎನ್‌ಐಎ ವಿಚಾರಣಾ ನ್ಯಾಯಾಲಯಕ್ಕೆ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಆರೋಪಿಗಳು ‘ಅಲ್‌ ಖೈದಾ’ ಮಾದರಿಯಲ್ಲಿ ‘ಬೇಸ್‌ ಮೂವ್‌ಮೆಂಟ್‌’ ಎಂಬ ಉಗ್ರವಾದಿ ಸಂಘಟನೆ ರಚಿಸಿಕೊಂಡು ಕಾನೂನುಬಾಹಿರ ಚಟುವಟಿಕೆ ನಡೆಸಲು ಮುಂದಾಗಿದ್ದರು ಎನ್ನುವ ಅಂಶವನ್ನು ಎನ್‌ಐಎ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.