ADVERTISEMENT

ಆರ್‌ಟಿಇ ಉಲ್ಲಂಘನೆಗೆ ಕಠಿಣ ಕ್ರಮ

ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

ಬೆಂಗಳೂರು:`ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಬಡ ಮಕ್ಕಳಿಗೆ ಪ್ರವೇಶಾವಕಾಶ ನೀಡದೆ ತಾರತಮ್ಯ ಮಾಡಿರುವ ಸಂಗತಿ ನನ್ನ ಗಮನಕ್ಕೂ ಬಂದಿದೆ. ಕಾಯ್ದೆ ಉಲ್ಲಂಘಿಸಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು  ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಎಚ್ಚರಿಸಿದರು.

ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆಶ್ರಯದಲ್ಲಿ ನಗರದ ಶಿಕ್ಷಕರ ಭವನದಲ್ಲಿ ಶುಕ್ರವಾರ ನಡೆದ `ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 (ಆರ್‌ಟಿಇ)' ಹಾಗೂ `ಕರ್ನಾಟಕ ಶಿಕ್ಷಣ ಹಕ್ಕು ನಿಯಮಗಳು 2012' ಪರಿಣಾಮಕಾರಿ ಅನುಷ್ಠಾನದ ಸಂಬಂಧ ಆಯೋಗದಲ್ಲಿ ಸ್ವೀಕರಿಸಿರುವ ದೂರುಗಳ ತ್ವರಿತ ಇತ್ಯರ್ಥ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಗ್ರಾಮೀಣ ಮಕ್ಕಳಿಗೆ ಪರಿಪೂರ್ಣವಾದ ಎಲ್ಲ ಸೌಕರ್ಯಗಳನ್ನು ಒದಗಿಸುವಲ್ಲಿ ನಾವು ವಿಫಲರಾಗಿದ್ದೇವೆ. ಈ ವಾಸ್ತವವನ್ನು ಒಪ್ಪಿಕೊಂಡೇ ಸಮಸ್ಯೆಯನ್ನು ಬಗೆಹರಿಸಬೇಕಿದೆ. ತುಳಿತಕ್ಕೆ ಒಳಗಾದವರು ಹಾಗೂ ಬಡವರ ಶೈಕ್ಷಣಿಕ ಹಿತಾಸಕ್ತಿ ಕಾಪಾಡಲು ಮೊದಲ ಆದ್ಯತೆ ನೀಡಲಾಗುವುದು' ಎಂದರು.

ಆಯೋಗದ ಅಧ್ಯಕ್ಷ ಎಚ್.ಆರ್.ಉಮೇಶ್ ಆರಾಧ್ಯ ಅಧ್ಯಕ್ಷತೆ ವಹಿಸಿ, `ಆರ್‌ಟಿಇ ಕಾಯ್ದೆ ಉಲ್ಲಂಘನೆ ಸಂಬಂಧ ಆಯೋಗಕ್ಕೆ 300ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಈ ಪೈಕಿ 30 ದೂರುಗಳ ವಿಚಾರಣೆ ನಡೆಸಲಾಗುತ್ತಿದೆ. ಮುಂದಿನ ಹಂತದಲ್ಲಿ ಜಿಲ್ಲಾ ಮಟ್ಟದಲ್ಲೂ ಈ ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ' ಎಂದರು.

`ಸ್ಪರ್ಧೆಗೆ ಇಳಿದಿಲ್ಲ'
`ಶಾಲೆಗಳ ರಾಷ್ಟ್ರೀಕರಣ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ಯಾರಿಗೂ ಸವಾಲು ಹಾಕಲು ಇದು ಕುಸ್ತಿ ಅಲ್ಲ. ನಾನು ಓಟಗಾರನೂ ಅಲ್ಲ. ಯಾರ ಜತೆಗೂ ಸ್ಪರ್ಧೆಗೆ ಇಳಿದಿಲ್ಲ' ಎಂದು ಕಿಮ್ಮನೆ ರತ್ನಾಕರ್ ಮಾರ್ಮಿಕವಾಗಿ ನುಡಿದರು.

`ರಾಜ್ಯದಲ್ಲಿ 52,000 ಶಾಲೆಗಳು ಇವೆ. ಎಲ್ಲ ಶಾಲಾ ಕಟ್ಟಡಗಳನ್ನು ಮೇಲ್ದರ್ಜೆಗೆ ಏರಿಸಲು ಸಾವಿರಾರು ಕೋಟಿ ರೂಪಾಯಿ ಬೇಕಿದೆ. ಹತ್ತಾರು ವರ್ಷಗಳ ಕಾಲ ಯೋಜನೆ ರೂಪಿಸಿದರೂ ಸಮರ್ಪಕ ಮೂಲಸೌಕರ್ಯ ಒದಗಿಸುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೊಂದು ಪಬ್ಲಿಕ್ ಶಾಲೆ ಆರಂಭಿಸಲು ಯೋಜಿಸಲಾಗಿದೆ. ಶಿಕ್ಷಣ ತಜ್ಞರು, ಪೋಷಕರು, ಜನಪ್ರತಿನಿಧಿಗಳ ಸಲಹೆ ಪಡೆದೇ ಮುಂದುವರಿಯಲಾಗುವುದು' ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.