ADVERTISEMENT

ಆರ್‌ಟಿಪಿಎಸ್: ಕಲ್ಲಿದ್ದಲು ಸ್ಥಿತಿ ಸೊನ್ನೆ!

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಬೆಂಗಳೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್) ಆರಂಭವಾದ 25 ವರ್ಷಗಳಲ್ಲಿ ಮೊದಲ ಬಾರಿಗೆ ಕಲ್ಲಿದ್ದಲು ಸಂಗ್ರಹ ಪ್ರಮಾಣ ಬಹುತೇಕ ಶೂನ್ಯಕ್ಕೆ ತಲುಪಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಆರ್‌ಟಿಪಿಎಸ್‌ನ ಎಂಟು ಘಟಕಗಳಿಗೆ ನಿತ್ಯ 24 ಸಾವಿರ ಟನ್ ಕಲ್ಲಿದ್ದಲಿನ ಅಗತ್ಯವಿದೆ. ಆದರೆ ಮಂಗಳವಾರ ಕೇವಲ 12 ಸಾವಿರ ಟನ್ ಸಂಗ್ರಹವಿತ್ತು. ಕರ್ನಾಟಕ ವಿದ್ಯುತ್ ನಿಗಮದ ಮೂಲಗಳ ಪ್ರಕಾರ ಗುರುವಾರ ಕಲ್ಲಿದ್ದಲು ಸಂಗ್ರಹ ಪ್ರಮಾಣವು 20 ಸಾವಿರ ಟನ್‌ಗೆ ಏರಿದೆ. ಇದು ಮತ್ತೆ ಹೆಚ್ಚುಕಡಿಮೆಯಾಗಿ ಒಂದು ದಿನ ಕಲ್ಲಿದ್ದಲು ಪೂರೈಕೆ ನಿಂತು ಹೋದರೂ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಎದುರಾಗಿದೆ.

ಮೂರು ಕಲ್ಲಿದ್ದಲು ಗಣಿಗಳಿಂದ ಸದ್ಯಕ್ಕೆ ನಿತ್ಯ 6ರಿಂದ 8 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಕಲ್ಲಿದ್ದಲು ಪ್ರಮಾಣ ಕಡಿಮೆ ಇರುವುದರಿಂದ ಕೆಲ ದಿನಗಳ ಹಿಂದೆ ಎರಡು ಘಟಕಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಎಂಟನೇ ಘಟಕ ಮಾತ್ರ ಸ್ಥಗಿತಗೊಂಡಿದ್ದು, ಕಲ್ಲಿದ್ದಲು ಪೂರೈಕೆಯನ್ನು ಆಧರಿಸಿ ಈ ಘಟಕವನ್ನು ಪುನರಾರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

 ರೈಲು ಮಾರ್ಗದಲ್ಲಿ ಅಥವಾ ಕಲ್ಲಿದ್ದಲು ತೆಗೆಯುವ ಗಣಿಗಳಲ್ಲಿ ಏನಾದರೂ ತೊಂದರೆಯಾಗಿ ಪೂರೈಕೆಯಲ್ಲಿ ಅಡಚಣೆಯಾದರೆ ರಾಜ್ಯದಲ್ಲಿ ವಿದ್ಯುತ್ ಪರಿಸ್ಥಿತಿ ಗಂಭೀರವಾಗಲಿದೆ. ಆರ್‌ಟಿಪಿಎಸ್‌ನ ಇತಿಹಾಸದಲ್ಲಿಯೇ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಕಲ್ಲಿದ್ದಲು ಸಂಗ್ರಹ ಯಾವತ್ತೂ ಇರಲಿಲ್ಲ ಎಂಬುದಾಗಿ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕನಿಷ್ಠ 30 ದಿನಕ್ಕೆ ಅಗತ್ಯವಿರುವ ಕಲ್ಲಿದ್ದಲನ್ನು ಸಂಗ್ರಹ ಮಾಡಿಕೊಳ್ಳಲಾಗುತ್ತದೆ. ಹಿಂದೆಲ್ಲ ಆರ್‌ಟಿಪಿಎಸ್‌ನಲ್ಲೂ ಇದೇ ಪ್ರಮಾಣದಲ್ಲಿ ಸಂಗ್ರಹ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಆರು ತಿಂಗಳಿಂದ ಈಚೆಗೆ ಕಲ್ಲಿದ್ದಲು ಸಂಗ್ರಹ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ.

ಏಳು ದಿನಕ್ಕೆ ಬೇಕಾಗುವಷ್ಟು ಕಲ್ಲಿದ್ದಲು ಇಲ್ಲದಿದ್ದರೆ ಗಂಭೀರ ಪರಿಸ್ಥಿತಿ ಎಂತಲೂ, ನಾಲ್ಕು ದಿನಕ್ಕೆ ಅಗತ್ಯ ಇರುವಷ್ಟಾದರೂ ಇಲ್ಲದಿದ್ದರೆ ತೀರಾ ಸಂಕಷ್ಟದ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಒಂದು ದಿನಕ್ಕೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿಲ್ಲ. ಹೀಗಾಗಿ 1,720 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಬೇಕಿದ್ದ ಆರ್‌ಟಿಪಿಎಸ್‌ನಲ್ಲಿ ಸರಾಸರಿ 1,300 ಮೆಗಾವಾಟ್ ಮಾತ್ರ ಉತ್ಪಾದನೆ ಆಗುತ್ತಿದೆ.

ಒಪ್ಪಂದದ ಪ್ರಕಾರ ಆರ್‌ಟಿಪಿಎಸ್‌ಗೆ ಆಂಧ್ರಪ್ರದೇಶದ ಸಿಂಗರೇಣಿ, ಒಡಿಶಾದ ಮಹಾನದಿ ಮತ್ತು ಮಹಾರಾಷ್ಟ್ರದ ವೆಸ್ಟರ್ನ್ ಕೋಲ್‌ಫೀಲ್ಡ್ಸ್‌ನಿಂದ ಕಲ್ಲಿದ್ದಲು ಪೂರೈಕೆಯಾಗುತ್ತದೆ. ಕಳೆದ ಸೆಪ್ಟೆಂಬರ್ ಕೊನೆಯ ವಾರದಲ್ಲಿ ತೆಲಂಗಾಣ ಹೋರಾಟದಿಂದಾಗಿ ಸಿಂಗರೇಣಿಯಿಂದ ಸಮರ್ಪಕವಾಗಿ ಕಲ್ಲಿದ್ದಲು ಪೂರೈಕೆಯಾಗದ ಕಾರಣ ತೊಂದರೆಯಾಗಿತ್ತು. ಆದರೆ ಈಗ ಆ ರೀತಿಯ ಹೋರಾಟ, ಪ್ರತಿಭಟನೆಗಳು ಇಲ್ಲ. ಆದರೂ ಕಲ್ಲಿದ್ದಲು ಕೊರತೆ ಇದೆ ಎನ್ನುತ್ತಾರೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ.

ಸಿಂಗರೇಣಿಯಿಂದ ಸ್ವಲ್ಪ ಕಡಿಮೆಯಾಗಿದೆ, ಮಹಾನದಿ, ವೆಸ್ಟರ್ನ್ ಕೋಲ್‌ಫೀಲ್ಡ್ಸ್‌ನಿಂದ ಕಲ್ಲಿದ್ದಲು ಪೂರೈಕೆಯಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಸಿಂಗರೇಣಿಯಲ್ಲಿ ಕಲ್ಲಿದ್ದಲು ತೆಗೆಯುವ ಕಾರ್ಯ ನಡೆಯುತ್ತಿದೆ. ಆದರೂ ಯಾಕೆ ಕಡಿಮೆಯಾಗಿದೆ ಎಂಬುದಕ್ಕೆ ಖಚಿತ ಉತ್ತರವಿಲ್ಲ.

ಸಂಶಯದ ನಡೆ: ಸಕ್ಕರೆ ಕಾರ್ಖಾನೆಗಳಲ್ಲಿ ಕೋ ಜನರೇಷನ್ ಮೂಲಕ ಉತ್ಪಾದನೆಯಾಗುವ 400 ಮೆಗಾವಾಟ್ ವಿದ್ಯುತ್ ಖರೀದಿಸಲು ಮಾತುಕತೆ ನಡೆದಿದ್ದು, ಕಾರ್ಖಾನೆ ಮಾಲೀಕರು ಯೂನಿಟ್‌ಗೆ ರೂ 5.30 ಕೇಳುತ್ತಿದ್ದಾರೆ. ಕೆಲ ಸಚಿವರ ಒಡೆತನದ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃತಕವಾಗಿ ಕಲ್ಲಿದ್ದಲಿನ ಅಭಾವ ಸೃಷ್ಟಿಸಿ, ಖಾಸಗಿಯವರಿಂದ ವಿದ್ಯುತ್ ಖರೀದಿಸುವ ಹುನ್ನಾರ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಲ್ಲಿದ್ದಲು ಕೊರತೆಯಿಂದಾಗಿ ಉತ್ಪಾದನೆ ಸ್ಥಗಿತವಾದರೆ ಅನಿವಾರ್ಯವಾಗಿ ಖರೀದಿಯ ಮೊರೆ ಹೋಗಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಕಲ್ಲಿದ್ದಲ್ಲಿನ ಅಭಾವ ಸೃಷ್ಟಿಸಲಾಗುತ್ತಿದೆ ಎನ್ನಲಾಗಿದೆ.

ಹಣ ಇಲ್ಲ: ಕಲ್ಲಿದ್ದಲು ಖರೀದಿಗೆ ಹಣ ಇಲ್ಲ. ಎಸ್ಕಾಂಗಳು ಮತ್ತು ಸರ್ಕಾರದಿಂದ ನಿಗಮಕ್ಕೆ ಸುಮಾರು 6,900 ಕೋಟಿ ರೂಪಾಯಿ ಬರಬೇಕಾಗಿದೆ. ಸರ್ಕಾರ ಕಾಲ ಕಾಲಕ್ಕೆ ನಿಗಮಕ್ಕೆ ಹಣ ನೀಡುತ್ತಿಲ್ಲ. ಕಂಪೆನಿಗಳು ಸಹ ಬಾಕಿ ಉಳಿಸಿಕೊಂಡಿವೆ. ಇದರಿಂದಾಗಿ ನಿಗಮ ಸಾಲದ ಸುಳಿಗೆ ಸಿಲುಕುವ ಸ್ಥಿತಿಯಲ್ಲಿದೆ. ವಸ್ತುಸ್ಥಿತಿಯನ್ನು ಮರೆಮಾಚಲು ಕೇಂದ್ರ ಸರ್ಕಾರ ಕಲ್ಲಿದ್ದಲು ಪೂರೈಕೆ ಮಾಡುತ್ತಿಲ್ಲ ಎಂದು ಕುಂಟು ನೆಪಗಳನ್ನು ಹೇಳಲಾಗುತ್ತಿದೆ ಅಷ್ಟೇ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ರಾಜಧಾನಿಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಆದರೆ ನಗರದ ಹೊರ ವಲಯ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ರಾಜ್ಯದ ಇತರ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸುಮಾರು ಎರಡು ಗಂಟೆ ಕಾಲ ವಿದ್ಯುತ್ ಕಡಿತವಾಗುತ್ತಿದೆ.

ಹಳ್ಳಿಗಳಲ್ಲಿ ತಲಾ ಆರು ಗಂಟೆ ಸಿಂಗಲ್‌ಫೇಸ್ ಮತ್ತು ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಎಲ್ಲ ಕಡೆ ಆರು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೆಚ್ಚಿನ ಪ್ರದೇಶಗಳಲ್ಲಿ ನಾಲ್ಕು ಗಂಟೆ ಮಾತ್ರ ವಿದ್ಯುತ್ ಲಭ್ಯವಾಗುತ್ತಿದೆ.

ಈ ತಿಂಗಳಲ್ಲಿ 178 ದಶಲಕ್ಷ ಯೂನಿಟ್‌ಗೆ ಬೇಡಿಕೆ ಬರಬಹುದು ಎಂದು ಅಂದಾಜಿಸಲಾಗಿದ್ದು, ಸದ್ಯಕ್ಕೆ ನಿತ್ಯ 160ರಿಂದ 165 ದಶಲಕ್ಷ ಯೂನಿಟ್‌ವರೆಗೂ ವಿದ್ಯುತ್ ಬೇಡಿಕೆ ಇದೆ. ಬೇಸಿಗೆಯಲ್ಲಿ 190 ದಶಲಕ್ಷ ಯೂನಿಟ್‌ಗಿಂತ ಹೆಚ್ಚಾಗುವ ನಿರೀಕ್ಷೆ ಇದೆ. ಈಗ ಸರಾಸರಿ 20 ದಶಲಕ್ಷ ಯೂನಿಟ್ ಖರೀದಿ ಮಾಡುತ್ತಿದ್ದು, ಮೇ ತಿಂಗಳ ಅಂತ್ಯದವರೆಗೂ ಇದನ್ನು ಮುಂದುವರಿಸಲಾಗುತ್ತದೆ ಎಂದು ಪವರ್ ಕಂಪೆನಿ ಆಫ್ ಕರ್ನಾಟಕ (ಪಿಸಿಕೆಎಲ್) ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.