ADVERTISEMENT

ಆಳ್ವಾಸ್‌ನ 24 ಸಾವಿರ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಎಲ್ಲೆಡೆ ತ್ರಿವರ್ಣಮಯ ಸಮವಸ್ತ್ರಗಳನ್ನು ಧರಿಸಿದ ವಿದ್ಯಾರ್ಥಿಗಳ ಸಮೂಹ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 14:19 IST
Last Updated 15 ಆಗಸ್ಟ್ 2016, 14:19 IST
ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ವತಿಯಿಂದ ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್‌ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಆಚರಣೆ. ಚಿತ್ರ: ಮಾನಸ ಮೂಡುಬಿದಿರೆ
ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ವತಿಯಿಂದ ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್‌ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಆಚರಣೆ. ಚಿತ್ರ: ಮಾನಸ ಮೂಡುಬಿದಿರೆ   

ಮೂಡುಬಿದಿರೆ: ಎಲ್ಲೆಡೆ ತ್ರಿವರ್ಣಮಯ ಸಮವಸ್ತ್ರಗಳನ್ನು ಧರಿಸಿದ ವಿದ್ಯಾರ್ಥಿಗಳ ಸಮೂಹ. ಕೈಯಲ್ಲಿ ರಾಷ್ಟ್ರಧ್ವಜ. ಚೆಂಡೆ ವಾದನಗಳ ನಿನಾದ, ಮಲ್ಲಕಂಬಗಳ ಪ್ರದರ್ಶನ ಈ ವೈವಿಧ್ಯಗಳೊಂದಿಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಸಭಾಂಗಣದಲ್ಲಿ  ಸುಮಾರು 24 ಸಾವಿರ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಸೋಮವಾರ 70ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ನಡೆಯಿತು.

ಕೇಸರಿ, ಬಿಳಿ, ಹಸಿರು ಬಣ್ಣದ ಉಡುಗೆ ತೊಟ್ಟು ಮುಖಕ್ಕೆ ತ್ರಿವರ್ಣ ಬಣ್ಣ ಹಚ್ಚಿಕೊಂಡು ಬಂದ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಒಂದೆಡೆ ಕಲೆತು ತ್ರಿವರ್ಣದಲ್ಲೆ ‘ಆಳ್ವಾಸ್‌’ ಎಂಬುದನ್ನು ಆಂಗ್ಲ ಪದದಲ್ಲಿ ಮೂಡಿಸಿ ಗಮನ ಸೆಳೆದರು. ದೇವಾಲಯಗಳಿಗಿಂತ ಶಿಕ್ಷಣ ಸಂಸ್ಥೆಗಳು ಶ್ರೇಷ್ಠ: ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂ ತ್ಯದ ಬಿಷಪ್‌ ಡಾ.ಅಲೋಶಿಯಸ್‌ ಪೌಲ್‌ ಡಿಸೋಜ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗಿಂತ ಶಿಕ್ಷಣ ಸಂಸ್ಥೆಗಳೇ ಶ್ರೇಷ್ಠ. ಭ್ರಾತೃತ್ವ ಮತ್ತು ಏಕತೆಯ ಬದುಕನ್ನು ಶಿಕ್ಷಣ ಸಂಸ್ಥೆಗಳು ಕಲಿಸಿಕೊಡುತ್ತವೆ.

ನಮ್ಮ ಹಿರಿಯರ ತ್ಯಾಗ, ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ಉಳಿಸುವ ಮಹತ್ತರ ಜವಬ್ದಾರಿ ದೇಶ ಕಟ್ಟುವ ಯುವಕರ ಮೇಲಿದೆ. ಸ್ವಚ್ಛ ಭಾರತ್‌, ಪರಿಸರ ರಕ್ಷಣೆ, ಜಲ ಸಂರಕ್ಷಣೆ, ರಕ್ತದಾನ, ಭ್ರಷ್ಟಾಚಾರ ನಿರ್ಮೂಲನೆ, ಕಾನೂನಿಗೆ ಗೌರವ, ಸಾರ್ವಜನಿಕ ಆಸ್ತಿ ರಕ್ಷಣೆ, ಕಾನೂನು ಪಾಲನೆ, ಮಹಿಳೆಯರಿಗೆ ಗೌರವ ಹಾಗೂ ಮೇಕ್‌ ಇನ್‌ ಇಂಡಿಯಾ ಈ ಹತ್ತು ಅಂಶಗಳನ್ನು ಮೈಗೂಡಿಸಿಕೊಂಡು ದೇಶದ ಭದ್ರತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಬೇಕಾಗಿದೆ. ಅನಕ್ಷರತೆ, ಬಡತನ ದೂರವಾಗಬೇಕು. ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣದಿಂದ  ಇದು ಸಾಧ್ಯ ಎಂದರು.

ಮೊಳಗಿದ ದೇಶಭಕ್ತಿ: ಪೌಲ್‌ ಡಿಸೋಜ ಅವರು ಧ್ವಜಾರೋಹಣ ನೆರವೇರಿಸಿದಾಗ ಅಳ್ವಾಸ್‌ನ ಸಾಂಸ್ಕೃತಿಕ ವಿದ್ಯಾರ್ಥಿಗಳು ವಂದೇ ಮಾತರಂ ರಾಷ್ಟ್ರಗೀತೆ ಹಾಡಿದರು. ಅತಿಥಿಗಳ ಭಾಷಣ ಮುಗಿದ ಬೆನ್ನಿಗೆ ದೇಶ ಭಕ್ತಿಗೀತೆ ಮೊಳಗಿತು. ಸಹಸ್ರಾರು ವಿದ್ಯಾರ್ಥಿಗಳು ಈ ಹಾಡಿಗೆ ದನಿಗೂಡಿಸಿ ಕೈಯಲ್ಲಿದ್ದ ತ್ರಿವರ್ಣ ಧ್ವಜವನ್ನು ನಿಧಾನವಾಗಿ ಅತ್ತಿಂದಿತ್ತ ಬೀಸಿದರು. ಇನ್ನು ಕೆಲವರು ಕೈಯಲ್ಲಿದ್ದ ಬಣ್ಣದ ಬಲೂನುಗಳನ್ನು ಆಕಾಶದೆತ್ತರಕ್ಕೆ ತೇಲಿ ಬಿಟ್ಟಾಗ ವಿವೇಕಾನಂದ ನಗರ ತ್ರಿವರ್ಣಮಯವಾಗಿ ಕಂಗೊಳಿಸಿತು. ಆಳ್ವಾಸ್‌ನ 24 ಸಾವಿರ ವಿದ್ಯಾರ್ಥಿಗಳು, 4 ಸಾವಿರ ಸಿಬ್ಬಂದಿ, ಸಾರ್ವಜನಿಕರು ಮತ್ತು ಪೋಷಕರ ಸಹಿತ  ಸುಮಾರು 35 ಸಾವಿರ ಮಂದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡರು. 

ಸಿಇಟಿ ವೈದ್ಯಕೀಯ ವಿಭಾಗದಲ್ಲಿ ಪ್ರಥಮ ರಾಂಕ್‌ ಪಡೆದ ಅನಂತ್‌ .ಜಿ, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರಾಂಕ್‌ ಪಡೆದ ದಕ್ಷಾ ಜೈನ್‌ ಮತ್ತು ಆಶಿಕ್‌ ನಾರಾಯಣ ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ 387ನೇ ರ್‍್ಯಾಂಕ್‌ ಪಡೆದ ಮಿಶಾಲ್‌ ಕ್ವೀನಿ ಅವರಿಗೆ ನಗದು ನೀಡಿ ಗೌರವಿಸಲಾಯಿತು.    ಶಾಸಕ ಅಭಯಚಂದ್ರ ಜೈನ್,  ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ , ಟ್ರಸ್ಟಿಗಳಾದ ಜಯಶ್ರೀ ಅಮರನಾಥ ಶೆಟ್ಟಿ, ವಿವೇಕ್‌ ಆಳ್ವ, ಉದ್ಯಮಿ ಶ್ರೀಪತಿ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.