ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬುಧವಾರ ಆರಂಭವಾಗಲಿದ್ದು, 27ರ ವರೆಗೆ ನಡೆಯಲಿದೆ.
ಪರೀಕ್ಷೆ ಸಂದರ್ಭದಲ್ಲಿ ನಕಲು, ಪ್ರಶ್ನೆಪತ್ರಿಕೆ ಬಹಿರಂಗ ಮೊದಲಾದ ಅಹಿತಕರ ಘಟನೆಗಳನ್ನು ತಡೆಯಲು ವಿಚಕ್ಷಣಾದಳ ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಬಾರಿ ಕಲಾ ವಿಭಾಗದಲ್ಲಿ 1,72,613, ವಾಣಿಜ್ಯ ವಿಭಾಗದಲ್ಲಿ 1,66,601 ಹಾಗೂ ವಿಜ್ಞಾನದಲ್ಲಿ 1,42,591 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.
984 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಇದರಲ್ಲಿ 188 ಸೂಕ್ಷ್ಮ ಮತ್ತು 70 ಅತಿ ಸೂಕ್ಷ್ಮ ಕೇಂದ್ರಗಳು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಏ.1ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಮೇ 1ರಿಂದ 3ರವರೆಗೆ ಸಿಇಟಿ ಪರೀಕ್ಷೆ ನಡೆಯಲಿದೆ. ನಂತರ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.
ಮಾರ್ಚ್ 28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೇ 28ರಿಂದ ಆರಂಭವಾಗಲಿದೆ. ಈ ಬಾರಿ 8,26,269 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಒಟ್ಟು 3,016 ಪರೀಕ್ಷಾ ಕೇಂದ್ರಗಳಿವೆ. ಇದರಲ್ಲಿ 163 ಸೂಕ್ಷ್ಮ ಮತ್ತು 51 ಅತಿ ಸೂಕ್ಷ್ಮ ಕೇಂದ್ರಗಳು. ಏಪ್ರಿಲ್ 19ರಿಂದ ಮೌಲ್ಯಮಾಪನ ನಡೆಯಲಿದ್ದು, ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಸಹಾಯವಾಣಿ: ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಹಾಯವಾಣಿ ಆರಂಭಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಹಿಸಿನ್ ಅವರು ಮಂಗಳವಾರ ಸಹಾಯವಾಣಿಗೆ ಚಾಲನೆ ನೀಡಿದರು.
ಬೆಳಿಗ್ಗೆ 10.15ರಿಂದ ಸಂಜೆ 5ರವರೆಗೆ ದೂರವಾಣಿ ಸಂಖ್ಯೆ: 080–23310075, 080–23310076.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.