ADVERTISEMENT

ಇಂದು ಕೇಜ್ರಿವಾಲ್ ಉಪವಾಸ ಅಂತ್ಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ವಿದ್ಯುತ್ ಹಾಗೂ ನೀರಿನ ದರ ಹೆಚ್ಚಳವನ್ನು ಖಂಡಿಸಿ ಮಾರ್ಚ್ 23ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರು 15ನೇ ದಿನವಾದ ಶನಿವಾರ ತಮ್ಮ ಉಪವಾಸವನ್ನು ಅಂತ್ಯಗೊಳಿಸಲಿದ್ದಾರೆ.

ಶುಕ್ರವಾರ ತಮ್ಮ ಯೋಜನೆಗಳನ್ನು ಪ್ರಕಟಿಸಿದ ಕೇಜ್ರಿವಾಲ್, `ಅಣ್ಣಾ ಹಜಾರೆ ಅವರನ್ನು ಆಹ್ವಾನಿಸಿ ಅವರ ಕೈಯಿಂದ  ಒಂದು ಲೋಟ ಹಣ್ಣಿನ ರಸ ಸೇವಿಸಿ ಉಪವಾಸವನ್ನು ಅಂತ್ಯಗೊಳಿಸುವ ಇಚ್ಛೆ ನನಗೆ ಇತ್ತು. ಆದರೆ ರಾಷ್ಟ್ರ ವ್ಯಾಪಿ ಪ್ರವಾಸದಲ್ಲಿರುವ ಹಜಾರೆ ಅವರಿಗೆ ಶನಿವಾರ ದೆಹಲಿಗೆ ಬರುವುದು ಸಾಧ್ಯವಾಗುವುದಿಲ್ಲ' ಎಂದು ಹೇಳಿದರು.

ಹರಿಯಾಣ ಪ್ರವಾಸದಲ್ಲಿರುವ  ಹಜಾರೆ ಅವರನ್ನು ಎಪಿಪಿ (ಆಮ್‌ಆದ್ಮಿ ಪಕ್ಷ)ಯ ಮುಖಂಡರಾದ ಮನಿಷ್ ಸಿಸೋಡಿಯಾ ಮತ್ತು ಕುಮಾರ್ ವಿಶ್ವಾಸ್  ಗುರುವಾರ ಭೇಟಿ ಮಾಡಿದ್ದರು. ಹಾಗೂ  ಕೇಜ್ರಿವಾಲ್ ಉಪವಾಸವನ್ನು ಅಂತ್ಯಗೊಳಿಸಲು ದೆಹಲಿಗೆ ಬರುವಂತೆ ಆಹ್ವಾನಿಸಿದ್ದರು. ದೆಹಲಿಗೆ ಬರಲಾಗದ  ತಮ್ಮ ಅಸಹಾಯಕ ಪರಿಸ್ಥಿತಿಯನ್ನು ವಿವರಿಸಿದ್ದ ಹಜಾರೆ ಅವರು, ಉಪವಾಸವನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು.

ದ್ವಿತೀಯ ಹಂತದ ಚಳವಳಿಯ ಅಂಗವಾಗಿ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು  ಪ್ರತಿಯೊಂದು ವಾರ್ಡ್‌ಗಳಿಗೆ ಭೇಟಿ ನೀಡಿ, ತೆರಿಗೆ ಪಾವತಿಸದ ಕಾರಣ ಅಧಿಕಾರಿಗಳು ಈಗಾಗಲೇ ಕಡಿತಗೊಳಿಸಿರುವ ವಿದ್ಯುತ್  ಹಾಗೂ ನೀರಿನ ಸಂಪರ್ಕಗಳನ್ನು ಮರು ಜೋಡನೆ ಮಾಡಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.