ADVERTISEMENT

ಇಂದು ಮತದಾನ: ಬಿಗಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಉಡುಪಿ/ಚಿಕ್ಕಮಗಳೂರು:  ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ರಾಜೀನಾಮೆಯಿಂದ ತೆರವಾದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ-ಚುನಾವಣೆಗೆ ಮತದಾನ ಭಾನುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆವರೆಗೂ ನಡೆಯಲಿದೆ.

ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್, ಜೆಡಿಎಸ್ ಅಭ್ಯರ್ಥಿ ಎಸ್. ಎಲ್.ಬೋಜೇಗೌಡ ಸೇರಿದಂತೆ ಕಣದಲ್ಲಿರುವ 14 ಮಂದಿ ಇದ್ದು, ತಮ್ಮ ಲೋಕಸಭೆ ಕ್ಷೇತ್ರದ ಪ್ರತಿನಿಧಿಯನ್ನು ಮತದಾರರು ಇಂದು ಚುನಾಯಿಸಲಿದ್ದಾರೆ.

ಶಾಂತಿಯುತ ಮತದಾನಕ್ಕೆ ಎರಡೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿವೆ. ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ವಿಶೇಷವಾಗಿ ಕಟ್ಟೆಚ್ಚರ ವಹಿಸಲಾಗಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಎರಡು ಜಿಲ್ಲೆಗಳಲ್ಲಿ 231 ಅತಿ ಸೂಕ್ಷ್ಮ ಮತ್ತು 788 ಸೂಕ್ಷ್ಮ ಹಾಗೂ 537 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಿಗೆ ಬಿಎಸ್‌ಎಫ್ ಮತ್ತು ಕೇಂದ್ರೀಯ ಅರೆಸೇನಾ ಪಡೆಯ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಉಪ ಚುನಾವಣೆ ಬಂದೋಬಸ್ತ್‌ಗಾಗಿ ಪೊಲೀಸ್ ಇಲಾಖೆಯ 416 ಅಧಿಕಾರಿಗಳು ಮತ್ತು 2,843 ಸಿಬ್ಬಂದಿ, 1,361 ಗೃಹರಕ್ಷಕದಳ ಸಿಬ್ಬಂದಿ, ರಾಜ್ಯ ಸಶಸ್ತ್ರ ಮಿಸಲು ಪಡೆಯ 24 ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 26 ತುಕಡಿ ಹಾಗೂ ಕೇಂದ್ರಿಯ ಅರೆಸೇನಾ ಪಡೆಯ ಒಟ್ಟು 10 ಕಂಪೆನಿಗಳನ್ನು ನಿಯೋಜಿಸಲಾಗಿದೆ. ಒಟ್ಟು 6 ಸಾವಿರ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ಕ್ಷೇತ್ರದಾದ್ಯಂತ 41 ಚೆಕ್‌ಪೋಸ್ಟ್‌ಗಳನ್ನೂ ನೆಲೆಗೊಳಿಸಲಾಗಿದೆ. ಕ್ಷೇತ್ರದಲ್ಲಿ 1,633 ಮತಗಟ್ಟೆಗಳಿದ್ದು (ಉಡುಪಿ 731, ಚಿಕ್ಕಮಗಳೂರು 902) ಎರಡೂ ಜಿಲ್ಲೆ ಸೇರಿ 12.53 ಲಕ್ಷ ಮತದಾರರ್ದ್ದಿದಾರೆ. ಶೇ. 97ರಷ್ಟು ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿದ್ದಾರೆ.

ಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರ ಎಂಬ ಕಾರಣದಿಂದ ಈ ಉಪ ಚುನಾವಣೆ ಪ್ರಾಮುಖ್ಯತೆ ಪಡೆದಿದೆ.
ಶನಿವಾರ ಬೆಳಿಗ್ಗೆಯೇ ಮತಗಟ್ಟೆ ಸಿಬ್ಬಂದಿ ಮತ್ತು ಅರೆ ಸೈನಿಕ ಪಡೆ, ಪೊಲೀಸ್ ಸಿಬ್ಬಂದಿ ಮತಗಟ್ಟೆಗೆ ಪ್ರಯಾಣ ಬೆಳೆಸಿದರು.

ಮತ ಎಣಿಕೆ ಕಾರ್ಯ ಇದೇ 21ರಂದು ಉಡುಪಿ ಕುಂಜಿಬೆಟ್ಟುವಿನ ಡಾ. ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.