ADVERTISEMENT

ಇಂದು ಸಂಜೆಯವರೆಗೂ ಚಾರ್ಮಾಡಿ ಮಾರ್ಗ ಬಂದ್‌

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:45 IST
Last Updated 13 ಜೂನ್ 2018, 19:45 IST
ಇಂದು ಸಂಜೆಯವರೆಗೂ ಚಾರ್ಮಾಡಿ ಮಾರ್ಗ ಬಂದ್‌
ಇಂದು ಸಂಜೆಯವರೆಗೂ ಚಾರ್ಮಾಡಿ ಮಾರ್ಗ ಬಂದ್‌   

ಬೆಂಗಳೂರು: ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ರಾಜ್ಯದ ಇತರ ಕಡೆಗಳಲ್ಲಿ ತಗ್ಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೆಚ್ಚುತ್ತಿದೆ.

ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಗುಡ್ಡ ಕುಸಿದು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮಣ್ಣು, ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ. ಗುರುವಾರ ಸಂಜೆಯ ತನಕ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮಂಗಳವಾರ ರಾತ್ರಿ ಮತ್ತೆ ಕೆಲವೆಡೆ ಮಣ್ಣು ಕುಸಿದಿದೆ. ಆಗಾಗ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ವೇಗವಾಗಿ ಕೈಗೊಳ್ಳಲು ತೊಡಕುಂಟಾಗಿದೆ.

ADVERTISEMENT

ಕೊಡಗಿನಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಗುಡ್ಡ ಕುಸಿದು ಕರ್ನಾಟಕ– ಕೇರಳ ನಡುವೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮರ ತೆರವು ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ಕೇರಳದ ಲಾರಿ ಕ್ಲೀನರ್‌ ಶರತ್‌ ಕುಮಾರ್‌ (27) ಮೃತಪಟ್ಟಿದ್ದಾರೆ. ಕೊಣನೂರು– ಮಾಕುಟ್ಟ ಅಂತರರಾಜ್ಯ ಹೆದ್ದಾರಿಯ ಹನುಮಾನ್‌ ಪಾರೆ ಎಂಬಲ್ಲಿ ಮಂಗಳವಾರ ರಾತ್ರಿ ಈ ಅವಘಡ ಸಂಭವಿಸಿದೆ.

ಕೇರಳಕ್ಕೆ ತೆರಳುವ ವಾಹನಗಳಿಗೆ ಕುಟ್ಟ ಮೂಲಕ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಲಾರಿ
ಹಳ್ಳಕ್ಕೆ ಬಿದ್ದಿದ್ದು ಮೇಲೆ ಎತ್ತಲು ಇನ್ನೂ ಸಾಧ್ಯವಾಗಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೊನ್ನಾವರ– ತುಮಕೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಜೋಗಿನಮಠದ ಸಮೀಪ ಬುಧವಾರ ನಸುಕಿನಲ್ಲಿ ಗುಡ್ಡ ಕುಸಿದು, ಐದು ಗಂಟೆಗಳವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.